"ನಾನು ಇವತ್ತು ಇಲ್ಲಿಗೆ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದೇನೆ. ಸಂಜೆ ರೈಲ್ವೆ ಯೋಜನೆ ಉದ್ಘಾಟನೆಗೆ ತೆರಳುತ್ತೇನೆ.ನಿಮ್ಮ ಈ ಅಭೂತಪೂರ್ವ ಸ್ವಾಗತಕ್ಕಾಗಿ ನಾನು ಆಭಾರಿಯಾಗಿದ್ದೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಪ್ಯಾಲೇಸ್ ಗ್ರೌಂಡ್’ನಲ್ಲಿ ವೇದಾಂತ ಭಾರತಿ ಆಯೋಜಿಸಿದ್ದ ಸೌಂದರ್ಯ ಲಹರಿ ಪಾರಾಯಣ ಕಾರ್ಯಕ್ರಮದಲ್ಲಿ ಭಾಷಣವನ್ನು ಆರಂಭಿಸಿದರು.
ಬೆಂಗಳೂರು (ಅ.29): "ನಾನು ಇವತ್ತು ಇಲ್ಲಿಗೆ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದೇನೆ. ಸಂಜೆ ರೈಲ್ವೆ ಯೋಜನೆ ಉದ್ಘಾಟನೆಗೆ ತೆರಳುತ್ತೇನೆ.ನಿಮ್ಮ ಈ ಅಭೂತಪೂರ್ವ ಸ್ವಾಗತಕ್ಕಾಗಿ ನಾನು ಆಭಾರಿಯಾಗಿದ್ದೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಪ್ಯಾಲೇಸ್ ಗ್ರೌಂಡ್’ನಲ್ಲಿ ವೇದಾಂತ ಭಾರತಿ ಆಯೋಜಿಸಿದ್ದ ಸೌಂದರ್ಯ ಲಹರಿ ಪಾರಾಯಣ ಕಾರ್ಯಕ್ರಮದಲ್ಲಿ ಭಾಷಣವನ್ನು ಆರಂಭಿಸಿದರು.
ನಾನು ಅನೇಕ ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ಸೌಂದರ್ಯ ಲಹರಿ ಶ್ಲೋಕಗಳನ್ನು ಪಡಿಸುತ್ತಾ ಬಂದಿದ್ದೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ. ಸೌಂದರ್ಯ ಲಹರಿಯ ಪಾರಾಯಣೋತ್ಸವಕ್ಕೆ ಹತ್ತು ವರ್ಷ ಆಗಿರುವುದಕ್ಕೆ ನನ್ನ ಶುಭಕಾಮನೆಗಳು. ಶ್ಲೋಕಗಳ ಪಾರಾಯಣದಿಂದ ಆತ್ಮಸೌಖ್ಯ ಲಭಿಸಲಿದೆ. ಶ್ಲೋಕಗಳಲ್ಲಿ ರಸವೂ ಇದೆ ರಹಸ್ಯವೂ ಇದೆ. ಸೌಂದರ್ಯ ಲಹರಿಯ ಮಂತ್ರಗಳಲ್ಲಿ ಬೇರೆಯೇ ಆದ ಭಾವ ಇದೆ. ಈ ಭಾವ ನಮಗೆಲ್ಲ ಹೊಸ ಚೈತನ್ಯ ನೀಡಲಿದೆ ಎಂದು ಗುಣಗಾನ ಮಾಡಿದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬುದರಲ್ಲಿ ವಿಶ್ವಾಸ ಇಟ್ಟಿರುವುದು ಶಂಕರಾಚಾರ್ಯರ ಪರಂಪರೆ, ಅಂತಹ ಮಹಾನ್ ಶಂಕರಾಚಾರ್ಯರು ರಚಿಸಿದ ಸೌಂದರ್ಯ ಲಹರಿಯ ಪರಾಯಣದಲ್ಲಿ ಪಾಲ್ಗೊಂಡಿರುವುದು ನನ್ನ ಸೌಭಾಗ್ಯ. ಇತ್ತೀಚಿಗೆ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದನ್ನು ನೆನೆದ ಮೋದಿ, ಇಂತಹ ಆಧುನಿಕ ಯುಗದಲ್ಲೂ ತಲುಪಲು ದುರ್ಗಮವಾಗಿರುವ ಹಾದಿಯಲ್ಲಿ ಸಾವಿರ ವರ್ಷಗಳ ಹಿಂದೆ ಆದಿ ಶಂಕರಾಚಾರ್ಯರು ಹೇಗೆ ತಲುಪಿದರು? ಮೂರು ಬಾರಿ ಇಡೀ ರಾಷ್ಟ್ರವನ್ನ ಹೇಗೆ ಸುತ್ತಿದರು? ಅದ್ಯಾವ ಪೂಜೆ ಅವರಿಗೆ ಈ ಶಕ್ತಿ ನೀಡಿತು ಅಂತ ಮೋದಿ ಆಶ್ಚರ್ಯವ್ಯಕ್ತಪಡಿಸಿದರು.
ಇದೇ ವೇಳೆ ಬೆಂಗಳೂರಿನ ಯುವ ಸಂಶೋಧಕರಿಗೆ, ಉದ್ಯಮಿಗಳಿಗೆ ಮುಕ್ತ ಆಹ್ವಾನ ನೀಡಿದ ಮೋದಿ, ಬೆಂಗಳೂರು ಸ್ಟಾರ್ಟಪ್ಗಳ ಕೇಂದ್ರ. ನವೋದ್ಯಮದಲ್ಲಿ ತೊಡಗಿರುವ ಬೆಂಗಳೂರಿನ ಯುವಕರಿಗೆ ಕ್ಲಿನ್ ಕುಕ್ಕಿಂಗ್ ಮಾಡೋಣ ಬನ್ನಿ ಅಂತ ಆಹ್ವಾನ ನೀಡಿದ್ರು. 2022 ಹೊತ್ತಿಗೆ 175 ಗೀಗಾ ವ್ಯಾಟ್ ರಿಈವಬಲ್ ಎನರ್ಜಿ ಉತ್ಪಾದಿಸುವ ಗುರಿ ಹೊಂದಿದ್ದೇವೆ ಎಂದ ಮೋದಿ, ದೇಶದಲ್ಲಿ ಇರುವ ಸಂಪನ್ಮೂಲಗಳ ಸಮರ್ಪಕವಾಗಿ ಬಳಸಿಕೊಂಡರೆ 750 ಗಿಗಾ ವ್ಯಾಟ್ ಸೋಲಾರ್ ಎನರ್ಜಿ ಬಳಸಬಹುದು ಅಂತ ಅಭಿಪ್ರಾಯಪಟ್ರು.
ಇದೇ ವೇಳೆ ಮೋದಿಯವರನ್ನು ಶ್ಲಾಘಿಸಿದ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧೀಶ ಶಂಕರಭಾರತಿ ಸ್ವಾಮೀಜಿ, ಮೋದಿಯವರು ದೇಶಾದ್ಯಂತ ಸ್ವಚ್ಛತಾ ಅಭಿಯಾನ ಜಾರಿಗೆ ತಂದಿದ್ದಾರೆ. ಇಂದಿನ ಸೌಂದರ್ಯ ಲಹರಿ ಪಾರಾಯಣ ಮಾನಸಿಕ ಸ್ವಚ್ಛತಾ ಅಭಿಯಾನ, ಎರಡೂ ಸೇರಿದರೆ ಜನ ನೆಮ್ಮದಿಯಾಗಿರ್ತಾರೆ ಅಂತ ಅಭಿಪ್ರಾಯಪಟ್ಟರು.
ಸಿಂಗಾಪುರ್ ದ ಬಗ್ಗೆ ನಾವು ತಿಳಿದಷ್ಟು ಬಂಗಾಳದ ಬಗ್ಗೆ ತಿಳಿದಿರುವುದಿಲ್ಲ. ದುಬೈ ಬಗ್ಗೆ ತಿಳಿದಷ್ಟು ಡೆಹ್ರಾಡೂನ್ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗುತ್ತಿದೆ, ನಮಗೆ ನಮ್ಮವರ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಯುವಪೀಳಿಗೆಯನ್ನು ಫೋನ್ ಗಳಿಂದ ಈ ಪುಸ್ತಕಗಳ ಕಡೆಗೆ ತರಬೇಕು. ಇಂಥ ಮಹತ್ ಕಾರ್ಯ ಮಾಡ್ತಿರುವ ವೇದಾಂತ ಭಾರತಿ ಸಂಸ್ಥೆಗೆ ನನ್ನ ಪ್ರಣಾಮಗಳು ಎಂದು ಕೃತಜ್ಞತೆ ಸಲ್ಲಿಸಿದರು.
ಹೊರಡುವ ಮುನ್ನ ವೇದಿಕೆ ಮುಂಭಾಗಕ್ಕೆ ಬಂದು ಜನರಿಗೆ ಕರಜೋಡಿಸಿ ಶಿರಭಾಗಿಸಿ ನಮಿಸಿದ ಮೋದಿ, ಭಾಷಣದಲ್ಲಿ ಎಲ್ಲೂ ಕೂಡ ರಾಜಕೀಯದ ಲವಲೇಶಕ್ಕೂ ಅವಕಾಶ ನೀಡದೆ ಪ್ರಜ್ಞಾವಂತಿಕೆ ಮೆರೆದರು.
