ಬೆಂಗಳೂರು (ಜು. 01): ಆರೋಗ್ಯ ಇಲಾಖೆಯು 2018-19ನೇ ಸಾಲಿನ ಔಷಧಗಳ ಖರೀದಿಗೆ ಕರೆದಿದ್ದ ಸುಮಾರು 300 ಕೋಟಿ ರು. ಮೊತ್ತದ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಬಹಿರಂಗವಾಗಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಬಿಡ್‌ದಾರರು ಸಲ್ಲಿಕೆ ಮಾಡಿರುವ ರಹಸ್ಯ ದಾಖಲೆಗಳು ಅಧಿಕಾರಿಗಳಿಂದಲೇ ಅಕ್ರಮವಾಗಿ ಸೋರಿಕೆಯಾಗಿವೆ.

ಖುದ್ದು ಆರೋಗ್ಯ ಇಲಾಖೆ ಅಧೀನದ ಸ್ಟೇಟ್‌ ಡ್ರಗ್ಸ್‌ ಲಾಜಿಸ್ಟಿಕ್‌ ಅಂಡ್‌ ವೇರ್‌ ಹೌಸಿಂಗ್‌ ಸೊಸೈಟಿ (ಕೆಡಿಎಲ್‌ಡಬ್ಲ್ಯುಎಸ್‌) ಅಧಿಕಾರಿಗಳೇ ದಾಖಲೆಗಳನ್ನು ಕಳ್ಳತನ ಮಾಡಿ ಬಿಡ್‌ದಾರರ ಕೈಗೆ ಒಪ್ಪಿಸಿದ್ದಾರೆ. ಜತೆಗೆ ಔಷಧ ಖರೀದಿ ಟೆಂಡರ್‌ನ ಮೌಲ್ಯಮಾಪನದಲ್ಲೂ ಅಧಿಕಾರಿಗಳು ಲೋಪಗಳನ್ನು ಮಾಡುವ ಮೂಲಕ ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲು ಯತ್ನಿಸಿದ್ದಾರೆ.

ಈ ಮೂಲಕ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ವೈದ್ಯಕೀಯ ಮಹಾವಿಶ್ವವಿದ್ಯಾಲಯ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಕಾಲದಲ್ಲಿ ಔಷಧ ಪೂರೈಸಲು ಕರೆದಿರುವ ಟೆಂಡರ್‌ನಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದರಿಂದ ಟೆಂಡರ್‌ ಪ್ರಕ್ರಿಯೆಯೂ ವಿಳಂಬವಾಗಿದ್ದು, ಔಷಧಗಳ ಪೂರೈಕೆಯಲ್ಲೂ ವಿಳಂಬವಾಗುವ ಸಾಧ್ಯತೆ ಇದೆ.

ಖುದ್ದು ಕೆಡಿಎಲ್‌ಡಬ್ಲ್ಯುಎಸ್‌ ಅಪರ ನಿರ್ದೇಶಕರು ಈ ಬಗ್ಗೆ ನಾಲ್ಕು ಮಂದಿ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದು, ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ಈ ನೋಟಿಸ್‌ ಹಾಗೂ ಟೆಂಡರ್‌ ದಾಖಲೆಗಳು ಕನ್ನಡಪ್ರಭಕ್ಕೆ ಲಭ್ಯವಾಗಿವೆ.

ಜತೆಗೆ, ಮಾ.29 ರಂದು ನೀಡಿರುವ ಶೋಕಾಸ್‌ ನೋಟಿಸ್‌ಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಿಲ್ಲ. ಹೀಗಾಗಿ ಈ ಸಂಬಂಧ ತನಿಖೆ ನಡೆಸಲಾಗುತ್ತಿದ್ದು, ಟೆಂಡರ್‌ ಪ್ರಕ್ರಿಯೆಯಲ್ಲಿ ಲೋಪಗಳು ಉಂಟಾಗಿರುವುದು ಕಂಡು ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಏನಿದು ಟೆಂಡರ್‌ ಅಕ್ರಮ?:

ಪ್ರತಿ ವರ್ಷದಂತೆ 2018-19ನೇ ಸಾಲಿನಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಬ್ಯಾಂಡೇಜ್‌ ಬಟ್ಟೆ, ಕಾಟನ್‌, ಗ್ಲೂಕೋಸ್‌ ಬಾಟಲ್‌, ಚುಚ್ಚುಮದ್ದು ಸೇರಿ 300 ಕೋಟಿ ರು. ಮೊತ್ತದ ಔಷಧಗಳ ಖರೀದಿಗೆ ಟೆಂಡರ್‌ ಕರೆಯಲಾಗಿತ್ತು.

ಔಷಧ ಖರೀದಿಗೆ ಆಹ್ವಾನಿಸಿದ್ದ ಕ್ಲೋಸ್ಡ್‌ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಬಿಡ್‌ದಾರರರು ಇ-ಪೋರ್ಟಲ್‌ನಲ್ಲಿ ತಮ್ಮ ಬಿಡ್‌ ಮೊತ್ತ ಹಾಗೂ ಟೆಂಡರ್‌ ಪಡೆಯಲು ತಮಗೆ ಇರುವ ಕಾರ್ಯಾನುಭವ, ಆದಾಯ ತೆರಿಗೆ, ಮಾರಾಟ ತೆರಿಗೆ ಪಾವತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದರು.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆ ನಿಯಮಗಳ ಅನ್ವಯ ಟೆಂಡರ್‌ ಪ್ರಕ್ರಿಯೆ ಮುಗಿಯುವವರೆಗೂ ಒಬ್ಬ ಬಿಡ್‌ದಾರರು ಬಿಡ್‌ ಮಾಡಿರುವ ಮೊತ್ತ ಹಾಗೂ ಸಂಬಂಧಪಟ್ಟದಾಖಲೆಗಳು ಸೋರಿಕೆ ಆಗಬಾರದು. ಆದರೆ, ಕೆಡಿಎಲ್‌ಡಬ್ಲ್ಯೂಎಸ್‌ ಅಧಿಕಾರಿಗಳು ಇ-ಪೋರ್ಟಲ್‌ನಿಂದ ಈ ದಾಖಲೆಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಅಲ್ಲದೆ, ಈ ದಾಖಲೆಗಳನ್ನು ಪ್ರತಿಸ್ಪರ್ಧಿ ಬಿಡ್‌ದಾರರಿಗೆ ಸಿ.ಡಿ. ಹಾಗೂ ಪೆನ್‌ಡ್ರೈವ್‌ಗಳಲ್ಲಿ ಹಾಕಿ ನೀಡಿದ್ದಾರೆ. ಬಿಡ್‌ ಮಾಡಿರುವ ಪ್ರತಿಯೊಬ್ಬರ ಬಿಡ್‌ ಮೊತ್ತವನ್ನು ಸೋರಿಕೆ ಮಾಡಿದ್ದಾರೆ. ತನ್ಮೂಲಕ ಬಿಡ್‌ ಮೊತ್ತವನ್ನು ಗಮನಿಸಿ ತಮಗೆ ಬೇಕಾದ ವ್ಯಕ್ತಿಗಳು ಸೂಕ್ತ ಮೊತ್ತಕ್ಕೆ ಬಿಡ್‌ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಬಿಡ್‌ದಾರರಿಂದ ಕೋಟಿಗಟ್ಟಲೇ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸೋರಿಕೆ ಬಗ್ಗೆ ಆರೋಗ್ಯ ಇಲಾಖೆಯೂ ಒಪ್ಪಿಕೊಂಡಿದೆ.

ಟೆಂಡರ್‌ ಮೌಲ್ಯಮಾಪನದಲ್ಲೂ ಅಕ್ರಮ:

ಟೆಂಡರ್‌ಗೆ ಸಂಬಂಧಪಟ್ಟಬಿಡ್‌ದಾರರು ದಾಖಲಾತಿಗಳನ್ನು ಆನ್‌ಲೈನ್‌ನಲ್ಲಿ (ಇ-ಪೋರ್ಟಲ್‌) ಸಲ್ಲಿಸಿದ ನಂತರ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ದಾಖಲೆ ಸಲ್ಲಿಸಿದವರ ಫೈನಾನ್ಷಿಯಲ್‌ ಬಿಡ್‌ ತೆರೆಯಲಾಗುತ್ತದೆ. ಬಳಿಕ ಕಡಿಮೆ ಮೊತ್ತ ನಮೂದಿಸಿರುವ ಬಿಡ್‌ದಾರರಿಗೆ ನಿಯಮಾನುಸಾರ ಔಷಧಗಳನ್ನು ಪೂರೈಸಲು ಟೆಂಡರ್‌ ನೀಡಲಾಗುತ್ತದೆ.

ಆದರೆ, ಇದಕ್ಕೂ ಮೊದಲೇ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ. ಟೆಂಡರ್‌ ಮೌಲ್ಯಮಾಪನದ ವೇಳೆ ಮಾರಾಟ ತೆರಿಗೆ, ಆದಾಯ ತೆರಿಗೆ ದಾಖಲೆ ಸಲ್ಲಿಸದವರು ಹಾಗೂ ಅರ್ಹರಲ್ಲದ ಬಿಡ್‌ದಾರರ ಹೆಸರನ್ನೂ ಮುಂದಿನ ಹಂತಕ್ಕೆ ಪರಿಗಣಿಸಲಾಗಿದೆ. ಟೆಂಡರ್‌ ಪರಿಶೀಲನಾ ಸಮಿತಿ ಸಭೆಯಲ್ಲಿ ನಡೆದ ಪರಿಶೀಲನೆಯಲ್ಲಿ ಈ ವಿಚಾರವು ಬಹಿರಂಗಗೊಂಡಿವೆ.

ಪರ್ಫಾರ್ಮೆನ್ಸ್‌ ಸರ್ಟಿಫಿಕೇಟ್‌, ಫಾಮ್‌ರ್‍ ಆಥರೈಸರ್‌, ಶೆಡ್ಯೂಲ್‌ ಪ್ಯಾಕಿಂಗ್‌ ಹಾಗೂ ಬಾರ್‌ ಕೋಡ್‌ ಸೇರಿ ಇನ್ನಿತರ ಮಾಹಿತಿ ದಾಖಲೆಗಳನ್ನು ಸಲ್ಲಿಸಿಲ್ಲ. ಟೆಂಡರ್‌ ಸಂಖ್ಯೆ 516, 517, 523, 524ರಲ್ಲಿ ಇಂತಹ ವ್ಯಾಪಕ ನ್ಯೂನತೆ ಇದ್ದರೂ ಅಧಿಕಾರಿಗಳು ಬಿಡ್‌ದಾರರ ಬಿಡ್‌ ಅನ್ನು ಮಾನ್ಯ ಮಾಡಿರುವುದು ಮತ್ತಷ್ಟುಅನುಮಾನಗಳಿಗೆ ಕಾರಣವಾಗಿದೆ.

ಔಷಧ ಪೂರೈಕೆ ವಿಳಂಬ ಸಾಧ್ಯತೆ

ಕೆಲವು ಔಷಧ ಸಕಾಲದಲ್ಲಿ ಲಭ್ಯವಾಗದೆ ರೋಗಿಗಳು ತೊಂದರೆ ಪಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಔಷಧ ಖರೀದಿಗೆ ಅನುದಾನ ಬಿಡುಗಡೆ ಮಾಡಿದೆ. ಆದರೆ, ಕಾಲ ಕಾಲಕ್ಕೆ ಟೆಂಡರ್‌ ಪ್ರಕ್ರಿಯೆ ಮುಗಿಸಿ ಶೀಘ್ರ ಔಷಧ ಸರಬರಾಜು ಮಾಡಲು ಕೆಡಿಎಲ್‌ಡಬ್ಲ್ಯುಎಸ್‌ ಸಂಸ್ಥೆ ವಿಫಲವಾಗಿರುವುದರಿಂದ ಮುಂದಿನ ದಿನದಲ್ಲಿ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಖುದ್ದು ಆರೋಗ್ಯ ಇಲಾಖೆ ನೀಡಿರುವ ನೋಟಿಸ್‌ನಲ್ಲಿಯೇ ಆತಂಕ ವ್ಯಕ್ತಪಡಿಸಿದೆ.

ಔಷಧ ಖರೀದಿ ಟೆಂಡರ್‌ ದಾಖಲೆಗಳು ಅಕ್ರಮವಾಗಿ ಸೋರಿಕೆಯಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸೊಸೈಟಿಯ ಹೆಚ್ಚುವರಿ ನಿರ್ದೇಶಕರು ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಅಧಿಕಾರಿಗಳಿಂದ ನಿಯಮ ಉಲ್ಲಂಘನೆ ಸಾಬೀತಾದ ತಕ್ಷಣ ಸೂಕ್ತ ಕ್ರಮ ಜರುಗಿಸಲಾಗುತ್ತದೆ.

- ಡಾ.ಟಿ.ಎಸ್‌. ಪ್ರಭಾಕರ್‌, ನಿರ್ದೇಶಕರು, ಆರೋಗ್ಯ ಇಲಾಖೆ.