ಅಗತ್ಯ ಬಿದ್ದರೆ ನಾನೇ ಕಾಶ್ಮೀರಕ್ಕೆ ತೆರಳುವೆ: ಸಿಜೆಐ ಗೊಗೋಯ್
ಅಗತ್ಯ ಬಿದ್ದರೆ ನಾನೇ ಕಾಶ್ಮೀರಕ್ಕೆ ತೆರಳುವೆ: ಸಿಜೆಐ ಗೊಗೋಯ್| ಹೈಕೋರ್ಟ್‌ಗೆ ತೆರಳಲು ಕಷ್ಟವಾಗುತ್ತಿದೆ ಎಂಬ ಅರ್ಜಿ ಬಗ್ಗೆ ಕಳವಳ| ಕಾಶ್ಮೀರ ಹೈಕೋರ್ಟ್‌ನಿಂದ ವರದಿ ಕೇಳಿದ ಮುಖ್ಯ ನ್ಯಾಯಮೂರ್ತಿ| ಕಾಶ್ಮೀರ ನಿರ್ಬಂಧ ಹಿಂಪಡೆವಾಗ ರಾಷ್ಟ್ರೀಯ ಹಿತಾಸಕ್ತಿ ನೆನಪಲ್ಲಿರಲಿ| 370 ರದ್ದುಗೊಳಿಸಿದ್ದ ಅರ್ಜಿ ವಿಚಾರಣೆಗೆ ಸ್ವೀಕಾರಕ್ಕೂ ಸುಪ್ರೀಂ ನಿರ್ಧಾರ
ನವದೆಹಲಿ[ಸೆ.17]: ಸಂವಿಧಾನದ 370ನೇ ವಿಧಿ ನಿಷ್ಕ್ರಿಗೊಳಿಸುವ ಮುನ್ನಾ ದಿನವಾದ ಆ.4ರಿಂದ ಕಾಶ್ಮೀರ ಕಣಿವೆಯಲ್ಲಿ ಹೇರಲಾಗಿರುವ ನಿರ್ಬಂಧವನ್ನು ಹಿಂತೆಗೆದುಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಕೈಗೊಳ್ಳುವಂತೆ ಜಮ್ಮು-ಕಾಶ್ಮೀರ ಆಡಳಿತಕ್ಕೆ ಸುಪ್ರೀಂಕೋರ್ಟ್ ಸೋಮವಾರ ಸೂಚನೆ ನೀಡಿದೆ. ಆದರೆ ಈ ಪ್ರಕ್ರಿಯೆ ಆಯ್ಕೆ ಆಧರಿತವಾಗಿರಬೇಕು ಹಾಗೂ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಕೈಗೊಂಡಿದ್ದಾಗಿರಬೇಕು ಎಂದೂ ಹೇಳಿದೆ.
ಇದೇ ವೇಳೆ ಮೊಬೈಲ್, ಇಂಟರ್ನೆಟ್, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಾಶ್ಮೀರದಲ್ಲಿ ಸಂಪೂರ್ಣ ಬಂದ್ ಆಗಿರುವುದರಿಂದ ಹೈಕೋರ್ಟ್ ಮೊರೆ ಹೋಗಲು ಆಗುತ್ತಿಲ್ಲ ಎಂಬ ಅರ್ಜಿದಾರರ ದೂರನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು, ಈ ಬಗ್ಗೆ ಹೈಕೋರ್ಟ್‌ನಿಂದ ವರದಿ ಕೇಳಿದರು. ಅಗತ್ಯ ಬಿದ್ದರೆ ತಾವೇ ಕಾಶ್ಮೀರಕ್ಕೆ ಭೇಟಿ ನೀಡುವುದಾಗಿಯೂ ಹೇಳಿದರು. ಮತ್ತೊಂದೆಡೆ 370ನೇ ವಿಧಿ ರದ್ದು ಪ್ರಶ್ನಿಸಿ ಜಮ್ಮು- ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದರು.
ಕಾಶ್ಮೀರ ಕುರಿತಾದ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಪೀಠ, ಕಾಶ್ಮೀರವನ್ನು ಸಹಜಸ್ಥಿತಿಗೆ ತರಲು ಕೈಗೊಳ್ಳಲಾದ ಕ್ರಮಗಳ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೆ ಸೂಚಿಸಿತು.
ಹೈಕೋರ್ಟ್‌ಗೆ ಹೋಗಲು ಆಗ್ತಿಲ್ಲ:
ಕಾಶ್ಮೀರದಲ್ಲಿ ಮೊಬೈಲ್, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಇದೇ ವೇಳೆ ಪೀಠಕ್ಕೆ ಅರ್ಜಿದಾರರು ದೂರಿದರು. ಈ ವಿಷಯಗಳ ಸಂಬಂಧ ಜಮ್ಮು-ಕಾಶ್ಮೀರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ. ಅಲ್ಲಿ ಏನು ನಡೆಯುತ್ತಿದೆ ಎಂಬುದು ಹೈಕೋರ್ಟ್‌ಗೆ ಗೊತ್ತಿರುತ್ತದೆ ಎಂದು ಹೇಳಿತು.
ಕಾಶ್ಮೀರ ಟೈಮ್ಸ್ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧ ಭಾಸಿನ್ ಪರ ವಕೀಲರಾದ ವೃಂದಾ ಗ್ರೋವರ್ ವಾದಿಸಿ, ಮೊಬೈಲ್, ಇಂಟರ್ನೆಟ್ ಹಾಗೂ ಸಾರ್ವಜನಿಕ ಸಾರಿಗೆ ಯಾವುದೂ ಇಲ್ಲ. ಹೈಕೋರ್ಟ್‌ಗೆ ಹೋಗಲು ಕಷ್ಟವಾಗುತ್ತಿದೆ ಎಂದು ಹೇಳಿದರು. ಇಬ್ಬರು ಮಕ್ಕಳ ಹಕ್ಕುಗಳ ಕಾರ್ಯಕರ್ತರ ಪರವಾಗಿ ವಿಚಾರಣೆಗೆ ಹಾಜರಾದ ಹುಜೆಫಾ ಅಹಮದಿ ಅವರು ವಾದಿಸಿ, ಹೈಕೋರ್ಟ್ ಮೊರೆ ಹೋಗಲು ಕಾಶ್ಮೀರಿಗಳಿಗೆ ಕಷ್ಟವಾಗುತ್ತಿದೆ ಎಂದು ಹೇಳಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಈ ಬಗ್ಗೆ ಹೈಕೋರ್ಟ್‌ನಿಂದ ವರದಿ ಕೇಳಲಾಗುವುದು. ಅಗತ್ಯ ಬಿದ್ದರೆ ನಾನೇ ಕಾಶ್ಮೀರಕ್ಕೆ ಬರುತ್ತೇನೆ. ಒಂದು ವೇಳೆ ಅರ್ಜಿದಾರರು ಹೇಳಿದ್ದು ಸುಳ್ಳಾದರೆ, ಗಂಭೀರ ಪರಿಣಾಮಗಳನ್ನು ಅವರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.