ಮುಸ್ಲಿಮರಿಲ್ಲದೇ ಹಿಂದುತ್ವ ಅಪೂರ್ಣ! ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್! ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರಿಗೆ ಜಾಗವಿಲ್ಲ ಎಂದರ್ಥವಲ್ಲ!  ವಿಶ್ವ ಸಹೋದರತೆ ಹಿಂದುತ್ವದ ಪರಂಪರೆ 

ನವದೆಹಲಿ(ಸೆ.19): ಮುಸ್ಲಿಮರಿಗೆ ಭಾರತದಲ್ಲಿ ಅವಕಾಶವಿಲ್ಲ ಎಂದಾದರೆ ನಮ್ಮ ಹಿಂದುತ್ವವೇ ಅಪೂರ್ಣ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ 'ಭವಿಷ್ಯದ ಭಾರತ: ಆರ್ ಎಸ್‍ಎಸ್ ದೃಷ್ಟಿಕೋನ' ಉಪನ್ಯಾಸ ಮಾಲಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಹಿಂದೂ ರಾಷ್ಟ್ರ ಎಂದ ಮಾತ್ರಕ್ಕೆ ಮುಸ್ಲಿಮರಿಗೆ ಜಾಗವಿಲ್ಲ ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದುತ್ವ ಎಂದರೆ ಹಿಂದೂಗಳು ಮಾತ್ರವಲ್ಲ ಮುಸ್ಲಿಂ ಸಮುದಾಯದವರನ್ನೂ ಒಪ್ಪಿಕೊಳ್ಳುವುದು ಇದರ ಒಂದು ಭಾಗವಾಗಿದೆ ಎಂದು ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. ಹಿಂದುತ್ವ ಎಂಬುದು ಭಾರತೀಯತೆಯ ಪ್ರತೀಕ ಮತ್ತು ಆರ್ ಎಸ್‍ಎಸ್ ಎಲ್ಲ ಧರ್ಮದವರ ಹಿತ ಬಯಸುತ್ತದೆ ಎಂದು ಭಾಗವತ್ ಹೇಳಿದರು.

Scroll to load tweet…

ವಿಶ್ವ ಸಹೋದರತೆ ಹಿಂದುತ್ವದ ಪರಂಪರೆಯಾಗಿದ್ದು, ಈ ಭ್ರಾತೃತ್ವವು ವೈವಿಧ್ಯತೆಯಲ್ಲಿ ಏಕತೆಯನ್ನು ಕಲ್ಪಿಸುತ್ತದೆ. ಹೀಗಾಗಿ ಸಂಘವು ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆಯಲು ಖುಷಿ ಪಡುತ್ತದೆ. ಇಡೀ ಸಮಾಜವನ್ನು ಒಟ್ಟುಗೂಡಿಸುವುದೇ ಸಂಘದ ಗುರಿಯಾಗಿದೆಯೇ ಹೊರತು ಸಂಘಕ್ಕೆ ಯಾವುದೇ ಪಕ್ಷ ಮುಖ್ಯವಲ್ಲ. ರಾಷ್ಟ್ರದ ಹಿತಾಸಕ್ತಿಯೊಂದೇ ಜೀವಾಳ ಎಂದು ಭಾಗವತ್ ತಿಳಿಸಿದರು.

ಇದೇ ವೇಳೆ ಸಂವಿಧಾನದ ಬಗ್ಗೆ ಮಾತನಾಡಿದ ಆರ್ ಎಸ್ ಎಸ್ ಮುಖ್ಯಸ್ಥ, ಆರ್ ಎಸ್‍ಎಸ್ ಸಂವಿಧಾನವನ್ನು ಗೌರವಿಸುತ್ತದೆ. ಸಂವಿಧಾನ ಹಾಗೂ ಕಾನೂನಿನ ವಿರುದ್ಧ ಸಂಘ ಯಾವತ್ತೂ ಕೆಲಸ ಮಾಡುವುದಿಲ್ಲ ಎಂದು ಹೇಳಿದರು. ಆ ಮೂಲಕ ಸಂವಿಧಾನ ಬದಲಿಸುವ ಹೇಳಿಕೆ ನೀಡಿದ್ದ ಕೇಂದ್ರ ಸಚಿವರಿಗೆ ಪರೋಕ್ಷ ತಿರುಗೇಟು ನೀಡಿದರು.