ಬೆಂಗಳೂರು (ಮಾ.29): ಚುನಾವಣೆ, ಹಬ್ಬ, ಸಾಲು ರಜೆಗಳ ಸಂದರ್ಭದಲ್ಲಿ ಐದಾರು ಪಟ್ಟು ಪ್ರಯಾಣ ದರ ಏರಿಸಿ ಗ್ರಾಹಕರ ಸುಲಿಗೆ ಮಾಡುವ ಖಾಸಗಿ ಬಸ್‌ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸುವುದಾಗಿ ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಬಸ್‌ಗಳು ಚುನಾವಣೆ, ಹಬ್ಬದ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಪ್ರಯಾಣ ದರ ಏರಿಸಿ ಗ್ರಾಹಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಮನಬಂದಂತೆ ಪ್ರಯಾಣ ದರ ಏರಿಸಿಕೊಂಡು ಗ್ರಾಹಕರಿಗೆ ತೊಂದರೆ ನೀಡುವ ಬಸ್‌ಗಳ ರಹದಾರಿಯನ್ನು ಅಮಾನತು ಅಥವಾ ರದ್ದುಗೊಳಿಸುವುದಾಗಿ ಎಚ್ಚರಿಸಿದರು.

ನಿಯಮದ ಪ್ರಕಾರ ಮೊದಲ ಬಾರಿಗೆ ತಪ್ಪು ಮಾಡಿದರೆ ದಂಡ ವಸೂಲಿ ಮಾಡಲಾಗುತ್ತದೆ. ನಂತರ ತಪ್ಪು ಮಾಡಿದರೆ ಮೂರರಿಂದ ಆರು ತಿಂಗಳ ಕಾಲ ರಹದಾರಿ ಅಮಾನತು ಮಾಡಲಾಗುತ್ತದೆ. ಮೂರಕ್ಕಿಂತ ಹೆಚ್ಚು ಬಾರಿ ನಿಯಮ ಉಲ್ಲಂಘಿಸಿದರೆ ಶಾಶ್ವತವಾಗಿ ರಹದಾರಿ ರದ್ದುಗೊಳಿಸಲಾಗುವುದು.

ಸಾರಿಗೆ ಇಲಾಖೆ ತನಿಖಾ ತಂಡಗಳು ವಿಶೇಷ ಕಾರ್ಯಾಚರಣೆ ಕೈಗೊಂಡು ಬಸ್‌ಗಳ ತಪಾಸಣೆ ನಡೆಸಲಿವೆ. ಇದರ ಜತೆಗೆ ಸಾರ್ವಜನಿಕರು ದುಬಾರಿ ಪ್ರಯಾಣ ದರ ವಸೂಲಿ ಮಾಡುವ ಬಸ್‌ಗಳ ಬಗ್ಗೆ ಸಾರಿಗೆ ಇಲಾಖೆಗೆ ದೂರವಾಣಿ ಸಂಖ್ಯೆ 22214900 ಅಥವಾ 22213785 ಮೂಲಕ ದೂರು ಹೇಳಬಹುದು ಎಂದರು.

ಶೇ.18 ರಷ್ಟು ಹೆಚ್ಚಳಕ್ಕೆ ಖಾಸಗಿಯವರ ಪ್ರಸ್ತಾವನೆ:

ಐದು ವರ್ಷದ ಹಿಂದೆ ಸ್ಟೇಜ್‌ ಕ್ಯಾರೇಜ್‌ (ಮಜಲು ವಾಹನ) ಬಸ್‌ಗಳ ಪ್ರಯಾಣ ದರ ಪರಿಷ್ಕರಣೆಯಾಗಿದೆ. ಇದೀಗ ಬಸ್‌ಗಳ ನಿರ್ವಹಣೆ, ಡೀಸೆಲ್‌ ದರ ಏರಿಕೆ ಸೇರಿದಂತೆ ವೆಚ್ಚ ಹೆಚ್ಚಾಗಿರುವುದರಿಂದ ಶೇ.18ರಷ್ಟುಪ್ರಯಾಣ ದರ ಹೆಚ್ಚಳ ಮಾಡುವಂತೆ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ಪ್ರಸ್ತಾವನೆ ಬಂದಿದೆ.

ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಕೂಡ ಶೇ.18ರಷ್ಟುದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಹಾಗಾಗಿ ಸ್ಟೇಜ್‌ ಕ್ಯಾರಿಯೇಜ್‌ ಬಸ್‌ಗಳ ಪ್ರಯಾಣ ದರವನ್ನು ಅಷ್ಟೇ ಪ್ರಮಾಣದಲ್ಲಿ ಹೆಚ್ಚಳ ಮಾಡುವಂತೆ ಸ್ಟೇಜ್‌ ಕ್ಯಾರೇಜ್‌ ಬಸ್‌ ಮಾಲೀಕರು ಮನವಿ ಮಾಡಿದ್ದಾರೆ. ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಚುನಾವಣೆ ಬಳಿಕ ರಾಜ್ಯ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಆಯುಕ್ತರು ತಿಳಿಸಿದರು.

ವರದಿ ಸಲ್ಲಿಕೆ:

ಕಾಂಟ್ರಾಕ್ಟ್ ಕ್ಯಾರೇಜ್‌ (ಒಪ್ಪಂದ ವಾಹನ) ಬಸ್‌ಗಳ ಪ್ರಯಾಣ ದರ ನಿಗದಿ ಮಾಡುವ ಅಧಿಕಾರ ಸಾರಿಗೆ ಇಲಾಖೆಗೆ ಇಲ್ಲ. ಒಪ್ಪಂದದ ವಾಹನಗಳಿಗೆ ಪ್ರಯಾಣ ದರ ನಿಗದಿ ಮಾಡುವ ಸಂಬಂಧ ಈ ಹಿಂದೆ ಒಂದು ಸಮಿತಿ ರಚಿಸಿದ್ದು, ಆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಕಿಲೋಮೀಟರ್‌ ಮಾನದಂಡದಲ್ಲಿ ಪ್ರಯಾಣ ದರ ನಿಗದಿಗೊಳಿಸುವ ಶಿಫಾರಸು ಮಾಡಿದೆ. ಈ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.

59 ಬಸ್‌ಗಳ ರಹದಾರಿ ರದ್ದು

ರಾಜ್ಯ ಸಾರಿಗೆ ಪ್ರಾಧಿಕಾರ 2018ರ ನವೆಂಬರ್‌ನಿಂದ 2019ರ ಫೆಬ್ರವರಿ ಅವಧಿಯಲ್ಲಿ ಕರ್ನಾಟಕ ಮೋಟಾರು ವಾಹನ ನಿಯಮ ಉಲ್ಲಂಘಿಸಿದ 59 ಖಾಸಗಿ ಬಸ್‌ಗಳ ಪರವಾನಗಿ ರದ್ದು ಮಾಡಿದ್ದು, 584 ಬಸ್‌ಗಳ ರಹದಾರಿ ಅಮಾನತುಗೊಳಿಸಿದೆ. ದಂಡ ರೂಪದಲ್ಲಿ 1.35 ಕೋಟಿ ರು. ಸಂಗ್ರಹಿಸಿದೆ.