ಜಮ್ಮು (ಡಿ. 27): ಮತ ಗಳಿಕೆಗಾಗಿ ರಾಜಕಾರಣಿಗಳು ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬ ಜನರ ಮಾತನ್ನು ನಿಜವಾಗಿಸುವಂತೆ ಜಮ್ಮು-ಕಾಶ್ಮೀರದ ಹಿರಿಯ ಕಾಂಗ್ರೆಸ್ಸಿಗರೊಬ್ಬರು ನಡೆದುಕೊಂಡಿದ್ದಾರೆ. ಕಣಿವೆ ರಾಜ್ಯದಲ್ಲಿ ಕಾಂಗ್ರೆಸ್‌ ಏನಾದರೂ ಅಧಿಕಾರಕ್ಕೆ ಬಂದರೆ, ಜೈಲಿನಲ್ಲಿರುವ ಭಯೋತ್ಪಾದಕರನ್ನು ಬಿಡುಗಡೆ ಮಾಡುವುದರ ಜತೆಗೆ ‘ಅಮಾಯಕ’ ಶಂಕಿತ ಭಯೋತ್ಪಾದಕರಿಗೆ 1 ಕೋಟಿ ರು. ಪರಿಹಾರ ನೀಡುವುದಾಗಿ ಪ್ರಕಟಿಸಿದ್ದಾರೆ.

ಅಲ್ಲದೆ ಕಾಶ್ಮೀರದಲ್ಲಿ ಅಮಾಯಕರನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ ನಾಯಕರನ್ನು ನೇಣಿಗೇರಿಸುವ ಭರವಸೆಯನ್ನೂ ಅವರು ಕೊಟ್ಟಿದ್ದಾರೆ. ಇಂತಹ ಕೀಳು ಮಟ್ಟಕ್ಕೆ ಇಳಿದಿರುವ ರಾಜಕಾರಣಿ ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ವೀಕ್ಷಕ ಹಾಜಿ ಸಗೀರ್‌ ಸಯೀದ್‌ ಖಾನ್‌.

ಕಾಶ್ಮೀರ ಒಂದು ಕಾಲದಲ್ಲಿ ಸ್ವರ್ಗವಾಗಿತ್ತು. ಈಗ ಹೆಣಗಳಿಂದ ತುಂಬಿಹೋಗಿದೆ. ಬಿಜೆಪಿ ನಡೆಸುತ್ತಿರುವ ದೌರ್ಜನ್ಯಗಳಿಂದಾಗಿ ಹಲವಾರು ಅಮಾಯಕರು ಸಾವನ್ನಪ್ಪುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಭಯೋತ್ಪಾದನೆ ಹೆಸರಿನಲ್ಲಿ ದೌರ್ಜನ್ಯದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ 1 ಕೋಟಿ ರು. ಪರಿಹಾರ ನೀಡುವುದರ ಜತೆಗೆ, ಭಯೋತ್ಪಾದನೆ ಆರೋಪದಡಿ ಜೈಲಿನಲ್ಲಿರುವವರ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.