ಕೊಹಿಮಾ (ಜು. 03): ಚುನಾವಣಾ ಅಕ್ರಮ ಬಯಲಿಗೆ ಎಳೆದವರ ಗುರುತು ಬಹಿರಂಗಪಡಿಸುವುದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್‌ ರಾವತ್‌ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಆ್ಯಪ್‌ ಆರಂಭಿಸಿದ್ದ ಚುನಾವಣಾ ಆಯೋಗ, ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಆ್ಯಪ್‌ನಲ್ಲೇ ದೂರು ನೀಡಲು ಅವಕಾಶ ಕಲ್ಪಿಸುವ ವ್ಯವಸ್ಥೆ ಆರಂಭಿಸಿತ್ತು.

ಈ ಬಗ್ಗೆ ನಾಗಾಲ್ಯಾಂಡ್‌ಗೆ ಭೇಟಿ ನೀಡಿದ ವೇಳೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಚುನಾವಣಾ ಅಕ್ರಮಗಳ ಬಗ್ಗೆ ಕರ್ನಾಟಕದಲ್ಲಿ ಈ ಆ್ಯಪ್‌ ಮೂಲಕ 780 ವಿಡಿಯೋ ದೂರುಗಳನ್ನು ನಾವು ಸ್ವೀಕರಿಸಿದೆವು. ಸಾಕ್ಷ್ಯ ಸಮೇತ ದೂರು ಸಲ್ಲಿಸಲು ಇದು ದೂರುದಾರಿಗೆ ಸಹಾಯ ಮಾಡಿತು. ದೂರುದಾರರ ಮಾಹಿತಿ ಬಹಿರಂಗವಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅಭಯ ನೀಡಿದರು.

ಇದೇ ವೇಳೆ, ಇವಿಎಂಗಳಲ್ಲಿ ಯಾವುದೇ ದೋಷವಿಲ್ಲ. ಸುಮ್ಮನೇ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ರಾಜಕೀಯ ಪಕ್ಷಗಳು ವಿದ್ಯುನ್ಮಾನ ಮತಯಂತ್ರದ ಮೇಲೆ ಗೂಬೆ ಕೂರಿಸುತ್ತಿವೆ ಎಂದು ರಾವತ್‌ ಆಕ್ಷೇಪಿಸಿದರು.