ಉತ್ತರಪ್ರದೇಶ ಸರ್ಕಾರ ಕೊನೆಗೂ ತನ್ನ ವಾಗ್ದಾನವನ್ನು ಈಡೇರಿಸಿದೆ. ಐತಿಹಾಸಿಕ ಮುಘಲ್ ಸರಾಯಿ ರೈಲು ನಿಲ್ದಾಣಕ್ಕೆ ಆರ್‌ಎಸ್‌ಎಸ್‌ ಚಿಂತಕ ದಿವಂಗತ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರನ್ನಿಡಲಾಗಿದೆ. ಇನ್ಮುಂದೆ ಈ ರೈಲು ನಿಲ್ದಾಣವನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರೈಲ್ವೆ ಜಂಕ್ಷನ್ ಕರೆಯಲಾಗುತ್ತದೆ.

ಲಕ್ನೋ(ಜೂ.5): ಉತ್ತರ ಪ್ರದೇಶದ ಅತಿ ದೊಡ್ಡ ಜಂಕ್ಷನ್ ಎಂದೇ ಖ್ಯಾತಿ ಪಡೆದಿರುವ ಐತಿಹಾಸಿಕ ಮುಘಲ್ ಸರಾಯಿ ರೈಲ್ವೆ ನಿಲ್ದಾಣಕ್ಕೆ, ಆರ್‌ಎಸ್‌ಎಸ್‌ ಚಿಂತಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರೈಲ್ವೆ ಜಂಕ್ಷನ್ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲಾಗಿದೆ.

ಈ ಸಂಬಂಧ ಉತ್ತರ ಪ್ರದೇಶ ಸರ್ಕಾರ ನಿನ್ನೆ ಸಂಜೆ ಅಧಿಸೂಚನೆ ಹೊರಡಿಸಿದ್ದು, ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ಮುಘಲ್ ಸರಾಯಿ ರೈಲ್ವೆ ನಿಲ್ದಾಣವನ್ನು ಮರುನಾಮಕರಣ ಮಾಡಲಾಗಿದೆ.

ಕಳೆದ ವರ್ಷ ಆಗಸ್ಟ್ನಲ್ಲಿ ಮುಘಲ್ ಸರಾಯಿ ರೈಲ್ವೆ ನಿಲ್ದಾಣದ ಹೆಸರು ಬದಲಾವಣೆಗೆ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಫೆಬ್ರವರಿ 11, 1968ರಲ್ಲಿ ಜನ ಸಂಘ ನಾಯಕ ದೀನ್ ದಯಾಳ್ ಉಪಾಧ್ಯಾಯ ಮುಘಲ್ ಸರಾಯಿ ರೈಲ್ವೆ ನಿಲ್ದಾಣದ ಸಮೀಪ ನಿಗೂಢವಾಗಿ ಮೃತಪಟ್ಟಿದ್ದರು.