ನಗರದ ಐತಿಹಾಸಿಕ ಬನಶಂಕರಿ ದೇವಸ್ಥಾನದ ಪಕ್ಕದಲ್ಲೇ ಬಿಬಿಎಂಪಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿದ್ದು ಇದಕ್ಕೆ ಸ್ಥಳೀಯ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು (ಆ.02): ನಗರದ ಐತಿಹಾಸಿಕ ಬನಶಂಕರಿ ದೇವಸ್ಥಾನದ ಪಕ್ಕದಲ್ಲೇ ಬಿಬಿಎಂಪಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿದ್ದು ಇದಕ್ಕೆ ಸ್ಥಳೀಯ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದೆ.

ಬಿಬಿಎಂಪಿ ದೇವಸ್ಥಾನದ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಮಾಡಲು ಹೊರಟಿದೆ. ಇಲ್ಲಿ ಕ್ಯಾಂಟೀನ್ ನಿರ್ಮಾಣ ಮಾಡಲು ಸಾಕಷ್ಟು ತೊಡಕುಗಳಿವೆ. ಅಧಿಕಾರಿಗಳು ಆತುರಾತುರವಾಗಿ ಜಾಗವನ್ನು ಆಯ್ಕೆ ಮಾಡಿದ್ದಾರೆ. ಆ.15 ರವರೆಗೆ ಗಡುವಿದೆ. ಸರ್ಕಾರ ದೇವಸ್ಥಾನಕ್ಕೆಂದು ನೀಡಿದ ಭೂಮಿಯಲ್ಲಿ ಕ್ಯಾಂಟೀನ್ ಮಾಡಲು ಹೇಗೆ ಸಾದ್ಯ ಎಂದು ಅಲ್ಲಿನ ಕಾರ್ಯಕರ್ತ ಪ್ರಕಾಶ್ ಎಸ್ ಪ್ರಶ್ನಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವ ಜಾಗ ಬಿಬಿಎಂಪಿಗೆ ಸೇರಲಿದೆ ಎಂದು ಇಂದಿರಾ ಕ್ಯಾಂಟೀನ್ ಯೋಜನೆಯ ಉಸ್ತುವಾರಿ ನೋಡಿಕೊಳ್ಲುತ್ತಿರುವ ಬಿಬಿಎಂಪಿ ವಿಶೇಷ ಅಧಿಕಾರಿ ಮನೋಜ್ ರಾಜನ್ ಹೇಳಿದ್ದಾರೆ.

ಅಲ್ಲಿನ ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸದೇ ಬಿಬಿಎಂಪಿ ಜಾಗವನ್ನು ಆಯ್ಕೆ ಮಾಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ನಿರ್ಮಾಣ ನೆಪದಲ್ಲಿ ನಗರದ ವಾರ್ಡ್’ಗಳಾದ ಕೋಣನಕುಂಟೆ, ಕತ್ರಿಗುಪ್ಪೆ, ಕೆಂಪೇಗೌಡ ನಗರ, ಅತ್ತೂರು, ದೇವರಾಜೀವನಹಳ್ಳಿ, ಬೆನ್ನಿಗನಹಳ್ಳಿ, ಸಿ.ವಿ ರಾಮನ್ ನಗರ, ಚಿನ್ನಪ್ಪ ಗಾರ್ಡನ್’ಗಳಲ್ಲಿ ಬಿಬಿಎಂಪಿ ಮರಗಳನ್ನು ಕಡಿಯುತ್ತಿರುವುದು ಸಾರ್ವಜನಿಕ ಆಕ್ರೋಶ ಕ್ಕೆ ಕಾರಣವಾಗಿದೆ.