ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು ದಕ್ಕಿತ್ತು. ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗಿತ್ತು. ಪಾಕಿಸ್ತಾನವನ್ನು ಬಗ್ಗು ಬಡಿಯೋದಕ್ಕೆ ಸಮರ್ಥ ವಾದ ಮಂಡನೆ ಮಾಡೋದಕ್ಕೆ ಅಂತಲೇ, ಹರೀಶ್ ಸಾಳ್ವೇ ಹಗಲು ರಾತ್ರಿ ಎನ್ನದೇ ಲಾ ಪಾಯಿಂಟ್ಗಳನ್ನ ಹುಡುಕಿದ್ರು. ಆ ಪಾಯಿಂಟ್ಗಳೇ ಜಾಧವ್ ಪ್ರಕರಣದಲ್ಲಿ ಮೊದಲ ಜಯ ತಂದಿವೆ.
ನವಾಜ್ ಷರೀಫ್ ಬೆವರುತ್ತಿದ್ದಾರೆ. ಕುಂತಲ್ಲೂ ನಿಂತಲ್ಲೂ ಬೆಚ್ಚಿ ಬೀಳ್ತಿದ್ದಾರೆ. ಭಾರತದ ಕೊಟ್ಟ ಭಾರೀ ಹೊಡೆತಕ್ಕೆ ಮುಟ್ಟು ನೋಡಿಕೊಳ್ಳುವಂಥ ಪರಿಸ್ಥಿತಿ ಬಂದಿದೆ ನವಾಜ್ ಷರೀಫ್ಗೆ. ಈ ಬಾರಿ ನವಾಜ್ ಷರೀಫ್ಗೆ ಗುನ್ನ ಬಿದ್ದಿದ್ದು ಭಾರತದಿಂದ ಅಲ್ಲ.. ಅಂತಾರಾಷ್ಟ್ರೀಯ ಕೋರ್ಟ್ನಿಂದ..
ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. 11 ನ್ಯಾಯಾಧೀಶರುಗಳ ಸಮ್ಮುಖದಲ್ಲಿ ನಡೆದ ವಿಚಾರಣೆ. ಮತ್ತು ಅದರ ನಂತರ ಹೊರ ಬಿದ್ದ ತೀರ್ಪು ಪಾಕಿಸ್ತಾನಕ್ಕೆ ಅರಗಿಸಿಕೊಳ್ಳಲಾಗದಂತಿದೆ. ಯಾಕಂದ್ರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ. ಪಾಕಿಸ್ತಾನ ಈ ಹಿನ್ನಡೆಯನ್ನು ಅನುಭವಿಸಿದ್ದು ಯಾಕೆ ಗೊತ್ತಾ? ಭಾರತವನ್ನ ಕೆಣಕಿದ್ದಕ್ಕೆ, ಭಾರತದ ವೀರ ಯೋಧ ಜಾಧವ್ರನ್ನ ಬಂಧಿಸಿ, ಗಲ್ಲು ಶಿಕ್ಷೆಯನ್ನ ಪ್ರಕಟಿಸಿದ್ದಕ್ಕೆ..
ಕುಲಭೂಷಣ್ ಜಾಧವ್
ಭಾರತಾಂಬೆಯ ಹೆಮ್ಮೆಯ ಮಗ. ಇಂಥಾ ವೀರ ಯೋಧನನ್ನ ಬಂಧಿಸಿದ್ದ ಪಾಕಿಸ್ತಾನ, ಇಲ್ಲಸಲ್ಲದ ಆರೋಪವನ್ನು ಹೊರಿಸಿತ್ತು. ಭಾರತದ ಗೂಢಚಾರನಾಗಿ ಬಂದು ಪಾಕಿಸ್ತಾನದ ಮಾಹಿತಿ ಕದಿಯುತ್ತಿದ್ದಾನೆ ಅಂತೆಲ್ಲಾ ಆರೋಪ ಹೊರಿಸಿ, ಗಲ್ಲು ಶಿಕ್ಷೆಯನ್ನೂ ವಿಧಿಸಿತ್ತು. ಜಾಧವ್ ಬಾಯಿಂದ ಪಾಕಿಸ್ತಾನ ಬಲವಂತವಾಗಿ ಪಡೆದು ಇದನ್ನೇ ಮುಂದಿಟ್ಟುಕೊಂಡು ಕುತಂತ್ರದಿಂದ ಗಲ್ಲು ಶಿಕ್ಷೆಯನ್ನ ಪ್ರಕಟಿಸಿತ್ತು ಪಾಕಿಸ್ತಾನ. ಆದ್ರೆ ಏನೂ ತಪ್ಪು ಮಾಡದ ಭಾರತದ ಮಾಜಿ ಯೋಧನನ್ನ ಬಿಡಿಸಬೇಕಾದದ್ದು ಭಾರತದ ಆದ್ಯ ಕರ್ತವ್ಯವಾಗಿತ್ತು. ಹೀಗಾಗಿ ಪ್ರಕರಣವನ್ನ ಅಂತಾರಾಷ್ಟ್ರೀಯ ನ್ಯಾಯಾಲಯದ ಗಮನಕ್ಕೆ ತಂದ್ರು. ಇಲ್ಲಿ ಭಾರತದ ಪರವಾಗಿ ವಾದಕ್ಕೆ ನಿಂತಿದ್ದು ಇಂಡಿಯನ್ ರಿಯಲ್ ಹೀರೋ.. ಭಾರತದ ಖ್ಯಾತ ವಕೀಲರಾದ ಹರೀಶ್ ಸಾಳ್ವೆ..
ಹರೀಶ್ ಸಾಳ್ವೆ.
ಇವರು ದೊಡ್ಡ ದೊಡ್ಡ ಕೇಸ್ಗಳಲ್ಲಿ ಸಮರ್ತವಾದ ವಾದ ಮಂಡಿಸಿ, ಗೆಲುವು ಸಾಧಿಸಿದ ಪ್ರತಿಭಾನ್ವಿತ ವಕೀಲ. ಸುಪ್ರೀಂಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡಿ, ಭಾರತದ ಸಾಲಿಸಿಟರ್ ಜನರಲ್ ಆಗಿ ಕೆಲಸ ಮಾಡಿ, ಅಂತಾರಾಷ್ಟ್ರೀಯ ವಕೀಲರಾಗಿ ಖ್ಯಾತಿಗಳಿಸಿದ ಕಾನೂನು ಪಂಡಿತರು. ಇಂಥಾ ಪವರ್ಫುಲ್ ವ್ಯಕ್ತಿ ಭಾರತದ ವೀರ ಯೋಧ ಕುಲಭೂಷಣ್ ಜಾಧವ್ ಬೆನ್ನಿಗೆ ನಿಂತರು. ಅಂತಾರಾಷ್ಟ್ರೀಯ ಕೋರ್ಟ್ನಲ್ಲಿ ಭಾರತದ ಪರ ವಾದ ಮಂಡನೆಗೆ ಸಜ್ಜಾದರು. ಇದಕ್ಕೆ ಇವರು ಪಡೆದ ಸಂಭಾವನೆ ಎಷ್ಟು ಗೊತ್ತಾ? ಬರೀ ಒಂದು ರೂಪಾಯಿ ಮಾತ್ರ.
ಹೌದು.. ಇದು ವೀರ ಯೋಧನನ್ನ ರಕ್ಷಿಸುವ ಕಾಯಕ. ನಾನು ಈ ಕಾರ್ಯಕ್ಕೆ ಹಣ ಪಡೆಯುವುದಿಲ್ಲ ಅಂತ ಹೇಳಿದ ಸಜ್ಜನ ವ್ಯಕ್ತಿ ಹರೀಶ್ ಸಾಳ್ವೆ. ಅಂತಾರಾಷ್ಟ್ರೀಯ ಕೋರ್ಟ್ನಲ್ಲಿ ಸಮರ್ಥವಾದ ವಾದ ಮಂಡಿಸಿ, ಪಾಕಿಸ್ತಾನವನ್ನ ಧೂಳೀಪಟ ಮಾಡಿದ್ರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೊಡೆತ ನೀಡಿದ್ರು. ಅಂತಿಮವಾಗಿ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸೇನಾಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆಗೆ ತಡೆ ತರುವಲ್ಲಿ ಯಶಸ್ವಿಯಾದ್ರು ಹರೀಶ್ ಸಾಳ್ವೆ.
ಷರೀಫ್'ಗೆ ಕುಳಿತಲ್ಲೆ ಬೆವರು ಶುರು
ನ್ಯಾಯಮೂರ್ತಿ ರೋನಿ ಅಬ್ರಹಾಂ ಸೇರಿದಂತೆ 16 ಜನರಿದ್ದ ಇಂಟರ್ನ್ಯಾಷಿನಲ್ ಕೋರ್ಟ್, ಭಾರತ ಮತ್ತು ಪಾಕಿಸ್ತಾನದ ವಾದವನ್ನ ಆಲಿಸಿತ್ತು. ಇದರಲ್ಲಿ ಪಾಕಿಸ್ತಾನ ಹೇಳ್ತಿದ್ದ ಸುಳ್ಳುಗಳನ್ನು ಸೂಕ್ಷ್ಮವಾಗಿ ಗಮನಿಸಿತ್ತು ನ್ಯಾಯಾಲಯ. ಭಾರತದ ಸಾಕ್ಷಿಗಳು ಮತ್ತು ಪಾಕಿಸ್ತಾನದ ಸುಳ್ಳುಗಳು. ಎಲ್ಲವನ್ನೂ ಪರಿಶೀಲಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ, ಪಾಕಿಸ್ತಾನ ಜಾಧವ್ಗೆ ನೀಡಿದ್ದ ಗಲ್ಲು ಶಿಕ್ಷೆಗೆ ತಡೆ ನೀಡಿತ್ತು. ಅಷ್ಟೇ ಅಲ್ಲ. ಮುಂದಿನ ತೀರ್ಪು ಪ್ರಕಟವಾಗುವವರೆಗೂ ಗಲ್ಲು ಶಿಕ್ಷೆ ಜಾರಿ ಮಾಡುವಂತಿಲ್ಲ. ಅಲ್ಲಿಯವರೆಗೂ ಜಾಧವ್ ಆರೋಗ್ಯಸ್ಥಿತಿಯ ಬಗ್ಗೆ ಸೂಕ್ತ ಮಾಹಿತಿ ಒದಗಿಸಿಬೇಕು ಅಂತ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ ಹೊರಡಿಸಿತ್ತು. ನದರ್ಲ್ಯಾಂಡ್ನ ಹೇಗ್ನಲ್ಲಿ ನಡೆದ ವಾದ ವಿವಾದಗಳು ಮತ್ತು ಅಂತಿಮ ತೀರ್ಪಿನಿಂದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ. ಪಾಕಿಸ್ತಾನದಲ್ಲೇ ಕೂತ್ಕೊಂಡು ತೀರ್ಪನ್ನ ಕೇಳಿಸಿಕೊಂಡಿದ್ದ ಪಾಕ್ ಪ್ರಧಾನಿ ನವಾಜ್ ಷರೀಫ್'ಗೆ ಕುಳಿತಲ್ಲೇ ಬೆವರು ಶುರುವಾಗಿದೆ.
ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು ದಕ್ಕಿತ್ತು. ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗಿತ್ತು. ಪಾಕಿಸ್ತಾನವನ್ನು ಬಗ್ಗು ಬಡಿಯೋದಕ್ಕೆ ಸಮರ್ಥ ವಾದ ಮಂಡನೆ ಮಾಡೋದಕ್ಕೆ ಅಂತಲೇ, ಹರೀಶ್ ಸಾಳ್ವೇ ಹಗಲು ರಾತ್ರಿ ಎನ್ನದೇ ಲಾ ಪಾಯಿಂಟ್ಗಳನ್ನ ಹುಡುಕಿದ್ರು. ಆ ಪಾಯಿಂಟ್ಗಳೇ ಜಾಧವ್ ಪ್ರಕರಣದಲ್ಲಿ ಮೊದಲ ಜಯ ತಂದಿವೆ.
2016ರಲ್ಲಿ ಇರಾನ್ನಿಂದ ಕುಲಭೂಷಣ್ ಜಾಧವ್ ಕಿಡ್ನಾಪ್
ಇದೆಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ, ಜಾಧವ್ ಗಲ್ಲು ಶಿಕ್ಷೆಗೆ ತಡೆ ನೀಡಿತ್ತು. ಪಾಕಿಸ್ತಾನ ಸುಳ್ಳು ಹೇಳಿದೆ. ಪಾಕ್ ಸಾಕ್ಷ್ಯಾಧಾರಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಅಂತ ಪಾಕಿಸ್ತಾನದ ಆರೋಪಗಳನ್ನು ತಳ್ಳಿ ಹಾಕಿ, ಜಾಧವ್ಗೆ ಮರು ಜೀವ ನೀಡಲಾಯ್ತು. ಈ ಸಮಸ್ತ ಗೆಲುವಿಗೆ ಕಾರಣವಾಗಿದ್ದು ಹರೀಶ್ ಸಾಳ್ವೆ ಅನ್ನೋ ರಿಯಲ್ ಹೀರೋ.
ಜಾಧವ್ ವಿರುದ್ಧದ ಆರೋಪಗಳನ್ನು ಸಾಬೀತು ಪಡಿಸುವ ಭರದಲ್ಲಿ, ಒಂದಷ್ಟು ಸುಳ್ಳುಗಳನ್ನ ಹೇಳಿತ್ತು. ಆ ಸುಳ್ಳುಗಳನ್ನು ಎತ್ತಿ ತೋರಿಸಿ, ಪಾಕ್ನ ಕಪಟ ಬುದ್ಧಿಯನ್ನ ಬಯಲು ಮಾಡಿದ್ರು ಭಾರತದ ಹರೀಶ್ ಸಾಳ್ವೆ.
2016 ಮಾರ್ಚ್ 3 : ಗೂಢಚಾರಿಕೆ ಆರೋಪದಡಿ ಇರಾನ್ ಗಡಿಯಲ್ಲಿ ಜಾಧವ್ ಬಂಧನ
2016 ಮಾರ್ಚ್ 24 : ಪಾಕಿಸ್ತಾನ ಸೇನೆಯಿಂದ ರಾ ಏಜೆಂಟ್ ಎಂದು ಜಾಧವ್ ವಿರುದ್ಧ ಆರೋಪ
2016 ಮಾರ್ಚ್ 26 : ಭಾರತದ ಹೈಕಮೀಷನರ್ ಗೆ ಸಮನ್ಸ್ ಜಾರಿ ಮಾಡಿದ ಪಾಕಿಸ್ತಾನ
2016 ಮಾರ್ಚ್ 29 : ಪಾಕಿಸ್ತಾನದಿಂದ ಜಾಧವ್ ತಪ್ಪೊಪ್ಪಿಗೆ ವಿಡಿಯೋ ಬಿಡುಗಡೆ
2016 ಏಪ್ರಿಲ್ 20 : ಕುಲಭೂಷಣ್ ಜಾಧವ್ ವಿರುದ್ಧ ಎಫ್ಐಆರ್ ದಾಖಲು
2017 ಮಾರ್ಚ್ 3 : ಯಾವುದೇ ಕಾರಣಕ್ಕೂ ಭಾರತಕ್ಕೆ ಜಾಧವ್ ಕಳಿಸಲ್ಲ ಎಂದ ಪಾಕ್
2017 ಏಪ್ರಿಲ್ 10 : ಕುಲಭೂಷಣ್ ಗೆ ಗಲ್ಲು ಶಿಕ್ಷೆ ಪ್ರಕಟಿಸಿದ ಪಾಕಿಸ್ತಾನದ ಸೇನಾ ಕೋರ್ಟ್
2017 ಮೇ 8 : ಜಾಧವ್ ಗಲ್ಲು ಶಿಕ್ಷೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಭಾರತ
2017 ಮೇ 9 : ಗಲ್ಲು ಶಿಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದ ಐಸಿಜೆ
2017 ಮೇ 15 : ಜಾಧವ್ ಗಲ್ಲನ್ನು ತಕ್ಷಣವೇ ರದ್ದು ಪಡಿಸಬೇಕೆಂದಿದ್ದ ಭಾರತ
2017 ಮೇ 18 : ಜಾಧವ್ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿದ ಐಸಿಜೆ
ಪಾಕ್ ಹೇಳಿದ ಸುಳ್ಳುಗಳು
ಜಾಧವ್ ಪ್ರಕರಣಕ್ಕೆ ತಡೆ ನೀಡುವ ಸಮಯದಲ್ಲಿ ಪಾಕಿಸ್ತಾನಕ್ಕೆ ಬಿರುಸಿನ ಚಾಟಿ ಬೀಸಿತ್ತು ನ್ಯಾಯಾಲಯ. ಇದಕ್ಕೆ ಕಾರಣ ಪಾಕಿಸ್ತಾನ ಹೇಳಿದ್ದ ಕೆಲವು ಸುಳ್ಳುಗಳು. ಜಾಧವ್ರನ್ನ ತಪ್ಪಿತಸ್ಥ ಅಂತ ಬಿಂಬಿಸಲು ಪಾಕಿಸ್ತಾನ ಯಾವೆಲ್ಲಾ ಸುಳ್ಳುಗಳನ್ನ ಹೇಳಿದೆ ಅನ್ನೋದನ್ನ, ಭಾರತದ ಹರೀಶ್ ಸಾಳ್ವೆ ಎತ್ತಿ ತೋರಿಸಿದರು.
ಸುಳ್ಳು ನಂ.01: ಜಾಧವ್ ಪ್ರಕರಣದಲ್ಲಿ ಸೂಕ್ತ ವಿಚಾರಣೆ ಮಾಡಿದೆ ಎಂದಿದ್ದು
ಸುಳ್ಳು ನಂ.02: ಜಾಧವ್ ಬಂಧನದ ವಿಷಯದಲ್ಲಿ ಗೊಂದಲವಿರುವುದು
ಸುಳ್ಳು ನಂ.03: ಜಾಧವ್ ಪ್ರಕರಣ ಅಂತಾರಾಷ್ಟ್ರೀಯ ಕೋರ್ಟ್ ವ್ಯಾಪ್ತಿಗೆ ಬರಲ್ಲ ಎಂದಿದ್ದು
ಜಾಧವ್ ಪ್ರಕರಣದಲ್ಲಿ ಏಕಪಕ್ಷೀಯವಾಗಿ ತೀರ್ಪು ಪ್ರಕಟಿಸಿದ ಪಾಕಿಸ್ತಾನ, ವಿಚಾರಣೆ ನಡೆಸಿಯೇ ತೀರ್ಪು ತೆಗೆದುಕೊಂಡಿದ್ದೀವಿ ಅಂತ ಸುಳ್ಳು ಹೇಳಿತ್ತು. ಜೊತೆಗೆ ಜಾಧವ್ ಬಂಧನದ ಸಂದರ್ಭ, ಸಮಯ ಮತ್ತು ಪ್ರದೇಶದ ಬಗ್ಗೆಯೂ ಸಾಕಷ್ಟು ಗೊಂದಲಗಳಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಇನ್ನು ಜಾಧವ್ ಪ್ರಕರಣ ಅಂತಾರಾಷ್ಟ್ರೀಯ ಕೋರ್ಟ್ ವ್ಯಾಪ್ತಿಗೆ ಬರಲ್ಲ ಎಂದಿತ್ತು ಪಾಕಿಸ್ತಾನ.
ಈ ಮೂರು ಸುಳ್ಳುಗಳಿಂದ ಪಾಕ್ ಕಪಟ ನಾಟಕ ಬಯಲಾಗಿತ್ತು. ಇಷ್ಟೆ ಅಲ್ಲ, ಜಾಧವ್ ಪ್ರಕರಣ ಇಂಟರ್'ನ್ಯಾಷನಲ್ ಕೋರ್ಟ್ ವ್ಯಾಪ್ತಿಗೆ ಬರುತ್ತೆ. ವಿಯೆನ್ನಾ ಒಪ್ಪಂದವನ್ನು ಮುರಿದಿದ್ದು ತಪ್ಪು. ಕುಲಭೂಷಣ್ಗೆ ಭಾರತದ ರಾಜತಾಂತ್ರಿಕ ನೆರವು ನೀಡುವುದು ಭಾರತದ ಹಕ್ಕು. ಅದಕ್ಕೆ ಅವಕಾಶ ಮಾಡಿಕೊಡದೇ ಇರುವುದು ನಿಮ್ಮ ತಪ್ಪು ಅಂತ, ಪಾಕ್ ವಿರುದ್ಧ ಗುಟುರು ಹಾಕಿತ್ತು ನ್ಯಾಯಾಲಯ. ಪಾಕಿಸ್ತಾನದ ಸುಳ್ಳುಗಳು ಮತ್ತು ಹರೀಶ್ ಸಾಳ್ವೆಯವರ ಸಮರ್ಥವಾದದಿಂದ, ಜಾಧವ್ಗೆ ಜಯ ಸಿಕ್ಕಿದೆ.
ಜಾಧವ್'ರಿಗಾಗಿ ಹೋರಾಟ
ಮೋದಿ ಎಲ್ಲರಂತಲ್ಲ, ಭಾರತಕ್ಕೆ ಸಣ್ಣ ಧಕ್ಕೆಯಾದ್ರೂ ಸಹಿಸೋದಿಲ್ಲ. ನಮ್ಮ ಸೈನಿಕರನ್ನ ಕೆಣಕಿದ್ದ ಪಾಕಿಸ್ತಾನಕ್ಕೆ, ಸರ್ಜಿಕಲ್ ದಾಳಿ ಮೂಲಕ ಉತ್ತರ ಕೊಟ್ಟಿದ್ರು.
ಸದಾ ಸೈನಿಕರ ಬೆನ್ನಿಗೆ ಇರೋ ಮೋದಿ, ಜಾಧವ್ ಜೀವ ಉಳಿಸಲು ಪಣ ತೊಟ್ಟು ನಿಂತಿದ್ದಾರೆ. ಇದು ಭಾರತದ ಪ್ರತಿಷ್ಠೆಯ ವಿಷಯವೂ ಆಗಿದೆ. ಇದೇ ಕಾರಣಕ್ಕೆ ಪ್ರಕರಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲಾಗಿದೆ. ಸದ್ಯಕ್ಕೇನೋ ಜಾಧವ್ ಗಲ್ಲು ಶಿಕ್ಷೆಗೆ ತಡೆ ನೀಡಲಾಗಿದೆ. ಮುಂದಿನ ತೀರ್ಪು ಬರೋವರೆಗೂ ಗಲ್ಲು ಶಿಕ್ಷೆ ವಿಧಿಸಸುವಂತಿಲ್ಲ ಅಂತ ಕೋರ್ಟ್ ಆದೇಶಿಸಿದೆ. ಅಂದ್ಹಾಗೆ ಮುಂದಿನ ತೀರ್ಪು ಯಾವಾಗ ಗೊತ್ತಾ? ಆಗಸ್ಟ್ನಲ್ಲಿ..
ಹೌದು.. ಆಗಸ್ಟ್ನಲ್ಲಿ ಮತ್ತೆ ಈ ಪ್ರಕರಣ ವಿಚಾರಣೆಗೆ ಬರಲಿದೆ. ಆಗ ಪಾಕಿಸ್ತಾನ ಜಾಧವ್ ವಿರುದ್ಧದ ಮತ್ತಷ್ಟು ಸಾಕ್ಷಾಧಾರಗಳನ್ನ ನೀಡೋ ಸಾಧ್ಯತೆ ಇದೆ. ಆಗ ಭಾರತ ಮತ್ತಷ್ಟು ಪವರ್ಫುಲ್ಲಾಗಿ ವಾದ ಮಂಡಿಸಬೇಕಿದೆ. ಪಾಕಿಸ್ತಾನವನ್ನು ಲಾ ಪಾಯಿಂಟ್ಗಳಲ್ಲೇ ಸಿಕ್ಕಾಕಿಸಬೇಕಿದೆ. ಆಗ ಮಾತ್ರವೇ ಜಾಧವ್ ಗಲ್ಲು ಶಿಕ್ಷೆ ಸಂಪೂರ್ಣವಾಗಿ ರದ್ದಾಗಲಿದೆ. ಅಲ್ಲಿಯವರೆಗೂ ಪಾಕ್ ಜೈಲಿನಲ್ಲೇ ದಿನ ದೂಡಬೇಕಿದೆ ಕುಲಭೂಷಣ್ ಜಾಧವ್.
ಸದ್ಯಕ್ಕೆ ಸಿಕ್ಕಿದ್ದು ತಾತ್ಕಾಲಿಕ ಜಯ. ಆಗಸ್ಟ್ ತಿಂಗಳಲ್ಲಿ ಮತ್ತೊಂದು ಸುತ್ತಿನ ಹೋರಾಟ ನಡೆಯಲಿದೆ. ಜಾಧವ್ರನ್ನ ಉಳಿಸಿಕೊಳ್ಳಲು ಆಗಲೂ ಸಮರ್ಥವಾಗಿ ವಾದ ಮಂಡಿಸಬೇಕಿದೆ ಭಾರತ. ಆ ಜವಾಬ್ದಾರಿ ಹರೀಶ್ ಸಾಳ್ವೆಯವರ ಹೆಗಲ ಮೇಲಿದೆ.
ವರದಿ: ಶೇಖರ್ ಪೂಜಾರ್, ಸುವರ್ಣ ನ್ಯೂಸ್
