ಮುಂಬೈ(ಜೂ.02): ಮಹಾತ್ಮಾ ಗಾಂಧಿ ಅವರನ್ನು ವಿರೋಧಿಸಿ, ನಾಥೂರಾಮ್ ಗೋಡ್ಸೆ ಅವರನ್ನು ಹೊಗಳಿದ ಮಹಾರಾಷ್ಟ್ರದ ಐಎಎಸ್ ಅಧಿಕಾರಿಯೋರ್ವರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ.

ವಿಶ್ವದಾದ್ಯಂತ ಇರುವ ಮಹಾತ್ಮಾ ಗಾಂಧಿ ಪ್ರತಿಮೆಗಳನ್ನು ತೆಗೆದುಹಾಕಬೇಕು ಮತ್ತು ನೋಟುಗಳಿಂದ ಅವರ ಭಾವಚಿತ್ರವನ್ನು ತೆಗೆಯಬೇಕು ಎಂದು ಐಎಎಸ್ ಅಧಿಕಾರಿ ನಿಧಿ ಚೌಧರಿ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದಾರೆ.

ಗಾಂಧಿ ಹೆಸರಿನಲ್ಲಿರುವ ದೇಶದ ಸಂಸ್ಥೆಗಳು ಮತ್ತು ರಸ್ತೆಗಳಿಗೆ ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದ ನಿಧಿ, ಮಹಾತ್ಮಾ ಗಾಂಧಿಯನ್ನು ನಾಥೂರಾಮ್ ಗೋಡ್ಸೆ ಕೊಂದಿದ್ದು ಒಳ್ಳೆಯದೇ ಆಯಿತು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.

ನಿಧಿ ಟ್ವೀಟ್ ವಿವಾದ ಸೃಷ್ಟಿಸಿದ ಬಳಿಕ ಅವರನ್ನು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತರಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿಧಿ ಚೌಧರಿ ತಮ್ಮ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶವೇಕೆ ಮಹಾತ್ಮ ಗಾಂಧಿ ಅವರ 150ನೇ ಜನ್ಮ ಜಯಂತಿಯನ್ನು ಆಚರಿಸಬೇಕು?, ದೇಶದಿಂದ ಗಾಂಧಿ ಪ್ರತಿಮೆಗಳನ್ನೆಲ್ಲಾ ತೆಗೆದು ಹಾಕಿದಾಗ ಮಾತ್ರ ಅವರಿಗೆ ನಾವು ನಿಜವಾದ ಗೌರವ ನೀಡಲು ಸಾಧ್ಯ ಎಂದು ನಿಧಿ ಟ್ವೀಟ್ ಮಾಡಿದ್ದರು.

ಇನ್ನು ಮಹಾತ್ಮಾ ಗಾಂಧಿ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಐಎಎಸ್ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ವಿಪಕ್ಷ ಎನ್‌ಸಿಪಿ ಆಗ್ರಹಿಸಿದೆ.