ಬೆಂಗಳೂರು :  ಹಿರಿಯ ಐಪಿಎಸ್‌ ಅಧಿಕಾರಿಗಳ ಬಳಿಕ ಈಗ ಐಎಎಸ್‌ ಅಧಿಕಾರಿಯೊಬ್ಬರು ಸೈಬರ್‌ ಕಳ್ಳರ ಬಲೆಗೆ ಬಿದ್ದು ಒಂದು ಲಕ್ಷ ರು. ಹಣ ಕಳೆದುಕೊಂಡಿದ್ದಾರೆ.

ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ಅವರೇ ವಂಚನೆಗೊಳಗಾಗಿದ್ದು, ಬ್ಯಾಂಕ್‌ ಸಿಬ್ಬಂದಿ ಸೋಗಿನಲ್ಲಿ ಅಧಿಕಾರಿಗೆ ಕರೆ ಮಾಡಿ ಕಿಡಿಗೇಡಿಗಳು ಮೋಸ ಮಾಡಿದ್ದಾರೆ. ಈ ಸಂಬಂಧ ಸೈಬರ್‌ ಕ್ರೈಂ ಠಾಣೆಗೆ ಪ್ರಧಾನ ಕಾರ್ಯದರ್ಶಿಗಳು ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್‌ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ವಿಧಾನಸೌಧದ ಸಿಂಡಿಕೇಟ್‌ ಬ್ಯಾಂಕ್‌ ಶಾಖೆಯಲ್ಲಿ ಬಸವರಾಜು ಅವರು ಖಾತೆ ಹೊಂದಿದ್ದಾರೆ. ನ.19ರಂದು ಪ್ರಧಾನ ಕಾರ್ಯದರ್ಶಿಗಳಿಗೆ ಬ್ಯಾಂಕ್‌ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡಿದ ದುಷ್ಕರ್ಮಿಗಳು, ನಿಮ್ಮ ಕ್ರೆಡಿಟ್‌ ಕಾರ್ಡ್‌ ಅವಧಿ ಮುಗಿದಿದೆ. ಅದರ ನವೀಕರಣ ಮಾಡಿಕೊಳ್ಳಿ ಎಂದಿದ್ದಾರೆ. ಕೆಲ ಹೊತ್ತಿನ ಬಳಿಕ ಮತ್ತೆ ಕರೆ ಮಾಡಿದ ಕ್ರೆಡಿಟ್‌ ಕಾರ್ಡ್‌ ಮಾಹಿತಿ ಕೋರಿದ್ದಾರೆ. ಆಗ ಕಿಡಿಗೇಡಿಗಳು ಕೇಳಿದಕ್ಕೆಲ್ಲ ಉತ್ತರಿಸಿದ ಪ್ರಧಾನ ಕಾರ್ಯದರ್ಶಿಗಳು, ಅದೇ ವೇಳೆ ಒಟಿಪಿ ಅನ್ನು ಸಹ ಹಂಚಿಕೊಂಡಿದ್ದಾರೆ. ಇದಾದ ಐದೇ ನಿಮಿಷದಲ್ಲಿ ಅವರ ಖಾತೆಯಿಂದ .99.96 ಸಾವಿರಗಳನ್ನು ದುಷ್ಕರ್ಮಿಗಳು ಡ್ರಾ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ರೀತಿ ಬ್ಯಾಂಕ್‌ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿದ ನಿವೃತ್ತ ಡಿಜಿಪಿ ಓಂಪ್ರಕಾಶ್‌ ಹಾಗೂ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ.ಎಂ.ಪ್ರಸಾದ್‌ ಅವರಿಗೆ ಸೈಬರ್‌ ಕಳ್ಳರು ವಂಚಿಸಿದ್ದರು. ಈಗ ಐಎಎಸ್‌ ಅಧಿಕಾರಿ ಮೋಸದ ಬಲೆಗೆ ಸಿಲುಕಿದ್ದಾರೆ.