ನವದೆಹಲಿ[ಆ.22]: ಇದೇ ವರ್ಷದ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣದ ವೇಳೆ ಪಾಕ್‌ ಸೇನೆಯಿಂದ ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಅವರು ಮತ್ತೆ ಮಿಗ್‌-21 ಯುದ್ಧ ವಿಮಾನ ಚಾಲನೆ ಮಾಡಿದ್ದಾರೆ.

ಈ ಮೂಲಕ ಪಾಕಿಸ್ತಾನ ಸೇನೆಯಿಂದ ಚಿತ್ರಹಿಂಸೆಗೆ ಒಳಗಾಗಿದ್ದ ಅಭಿನಂದನ್‌ ಅವರು 6 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಯುದ್ಧ ವಿಮಾನ ಹಾರಾಟ ನಡೆಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ವರ್ತಮಾನ್‌ ಅವರು ರಾಜಸ್ಥಾನದ ಐಎಎಫ್‌ ವಾಯುನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರು ಬುಧವಾರ ವಿಮಾನದ ಹಾರಾಟ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ವಿಂಗ್ ಕಮಾಂಡರ್ ಅಭಿನಂದನ್ ಯಾರು? ಇಲ್ಲಿದೆ ಧೀರ ಯೋಧನಿಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳು

ಫೆಬ್ರವರಿ 27ರಂದು ಪಾಕಿಸ್ತಾನದ ಅಮೆರಿಕ ನಿರ್ಮಿತ ಎಫ್‌-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ, ಬಳಿಕ ಮತ್ತೊಂದು ಯುದ್ಧ ವಿಮಾನ ಬೆನ್ನಟ್ಟಿಹೋಗಿದ್ದರು. ಈ ವೇಳೆ ಮಿಗ್‌-21 ಯುದ್ಧ ವಿಮಾನ ಪಾಕಿಸ್ತಾನದ ಭಾಗದಲ್ಲಿ ಪತನಗೊಂಡ ಹಿನ್ನೆಲೆಯಲ್ಲಿ ಅಭಿನಂದನ್‌ ವರ್ತಮಾನ್‌ ಅವರು ಪಾಕ್‌ ಸೇನೆಯಿಂದ ಬಂಧನಕ್ಕೊಳಗಾಗಿದ್ದರು. ಆ ನಂತರ ಭಾರತದ ಒತ್ತಡಕ್ಕೆ ಮಣಿದು, ಪಾಕಿಸ್ತಾನ ಅಭಿನಂದನ್‌ರನ್ನು ಮಾ.1ರಂದು ಬಿಡುಗಡೆ ಮಾಡಿತ್ತು.