ನವದೆಹಲಿ(ಅ.08): ಕಳೆದ ಫೆಬ್ರವರಿಯಲ್ಲಿ ಭಾರತದ ಸುಖೋಯ್-30MKI ಯುದ್ಧ ವಿಮಾನ ಹೊಡೆದುರುಳಿಸಿದ್ದಾಗಿ ಸುಳ್ಳು ಹೇಳಿದ್ದ ಪಾಕಿಸ್ತಾನಕ್ಕೆ, ಭಾರತೀಯ ವಾಯುಸೇನೆ ಮುಟ್ಟಿ ನೋಡಿಕೊಳ್ಳುವಂತ ಭರ್ಜರಿ ಪ್ರತಿಕ್ರಿಯೆ ನೀಡಿದೆ.

ಇಂದು 87ನೇ ವಾಯುಸೇನಾ ದಿನಾಚರಣೆ ಅಂಗವಾಗಿ ಉತ್ತರಪ್ರದೇಶದ ಹಿಂಡನ್ ವಾಯುನೆಲೆಯಲ್ಲಿ ಯುದ್ಧ ವಿಮಾನಗಳ ಕವಾಯತು ನಡೆದಿದ್ದು, ಶಕ್ತಿ ಪ್ರದರ್ಶನದಲ್ಲಿ ಪಾಕ್ ಹೊಡೆದುರುಳಿಸಿದ್ದಾಗಿ ಹೇಳಿದ್ದ ಸುಖೋಯ್-30MKI ಯುದ್ಧ ವಿಮಾನವನ್ನೇ ಪ್ರದೆರ್ಶಿಸಲಾಗಿದೆ.

ಹಿಂಡನ್ ವಾಯುನೆಲೆಯಲ್ಲಿ ಇಂದು 'ಅವೆಂಜರ್ ಫಾರ್ಮೇಶನ್' ಎಂದು ಕರೆಯಲಾಗುವ ಮೂರು ಮಿರಾಜ್-2000 ಯುದ್ಧ ವಿಮಾನಗಳು ಹಾಗೂ ಎರಡು ಸುಖೋಯ್-30MKI ಯುದ್ಧ ವಿಮಾನಗಳ ಶಕ್ತಿ ಪ್ರದರ್ಶನ ಏರ್ಪಡಿಲಾಗಿತ್ತು. ಈ ವೇಳೆ ಪಾಕ್ ಹೇಳಿದ್ದ ಯುದ್ಧ ವಿಮಾನವನ್ನೇ ಬಳಿಸಿಕೊಂಡಿದ್ದು, ಅದರ ಸುಳ್ಳನ್ನು ಇಡೀ ಜಗತ್ತಿನ ಮುಂದೆ ವಾಯುಸೇನೆ ತೆರೆದಿಟ್ಟಿದೆ.

ಅಲ್ಲದೇ ಪಾಕ್ ಹೇಳಿದ್ದ ಯುದ್ಧ ವಿಮಾನವನ್ನು ಫೆ. 27ರಂದು ಮುನ್ನಡೆಸಿದ್ದ ಇಬ್ಬರು ಭಾರತೀಯ ವಾಯುಸೇನೆ ಪೈಲೆಟ್'ಗಳೇ ಇಂದೂ ಕೂಡ ಮುನ್ನಡೆಸಿದ ಪರಿಣಾಮ, ಪಾಕ್‌ ಮತ್ತಷ್ಟು ಮುಜುಗರಕ್ಕೀಡಾಗಿದೆ.

ಈ ವೇಳೆ ಮಾತನಾಡಿದ ನೂತನ ವಾಯುಸೇನೆ ಮುಖ್ಯಸ್ಥ RKS ಬದೌರಿಯಾ, ವಿಂಗ್ ಕಮಾಂಡರ್ ಅಭಿನಂದನ್ ಹೊಡೆದುರುಳಿಸಿದ್ದ ತನ್ನ ಎಫ್-16 ಯುದ್ಧ ವಿಮಾನದ ಪತನದ ಪ್ರಹಸನವನ್ನು ಮುಚ್ಚಿಡಲು ಪಾಕಿಸ್ತಾನ ಭಾರತದ ಸುಖೋಯ್-30MKI ಯುದ್ಧ ವಿಮಾನ ಹೊಡೆದುರುಳಿಸಿದ್ದಾಗಿ ಸುಳ್ಳು ಕತೆ ಕಟ್ಟಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.