ಗಾಜಿಯಾಬಾದ್[ಅ.08]: ಫೆಬ್ರವರಿಯಲ್ಲಿ ನಡೆದಿದ್ದ ಬಾಲಾಕೋಟ್ ದಾಳಿ ವೇಳೆ, ಗಡಿ ನಿಯಂತ್ರಣಾ ರೇಖೆ ದಾಟಿ ಬಂದಿದ್ದ ಪಾಕಿಸ್ತಾನದ ಎಫ್ 16 ವಿಮಾನವನ್ನು ಹೊಡೆದುರುಳಿಸಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ವಾಯುಸೇನಾ ದಿನದಂದು ಮತ್ತೆ ಮಿಂಚಿದ್ದಾರೆ.

ವಿಂಗ್ ಕಮಾಂಡರ್ ಅಭಿನಂದನ್ ನೇತೃತ್ವದ ತಂಡ ಮಂಗಳವಾರ ಗಾಜಿಯಾಬಾದ್ ನ ಹಿಂಡನ್ ವಾಯುನೆಲೆಯಲ್ಲಿ ನಡೆದ ವಾಯುಪಡೆಯ ದಿನದ ಮೆರವಣಿಗೆಯಲ್ಲಿ ಮಿಗ್ -21 ಯುದ್ಧ ವಿಮಾನವನ್ನು ಹಾರಿಸಿದ್ದಾರೆ. 'ಎವೆಂಜರ್ ಫಾರ್ಮೇಷನ್ ನಲ್ಲಿ  3 ಮಿರಾಜ್ 2000 ಯುದ್ಧ ವಿಮಾನಗಳು ಹಾಗೂ 2 SU-30 MKI ಯುದ್ಧ ವಿಮಾನಗಳು ಹಾರಾಟ ನಡೆಸಿವೆ.

ಇನ್ನು ಏರ್ ಶೋಗಾಗಿ ಅಭಿನಂದನ್ ಏರ್‌ಬೇಸ್‌ ಪ್ರವೇಶಿಸುತ್ತಿದ್ದಂತೆ ಸಾರ್ವಜನಿಕರು ಚಪ್ಪಾಳೆಗಳ ಸುರಿಮಳೆಗೈದಿದ್ದಾರೆ. ಇನ್ನು ಇದೇ ಮೊದಲ ಬಾರಿ ವಿಶ್ವದ ಅತ್ಯಂತ ಅಪಾಯಕಾರಿ ಯುದ್ಧ ವಿಮಾನ ಅಪಾಚೆ ತನ್ನ ಶಕ್ತಿ ಪ್ರದರ್ಶನ ತೋರಿದ್ದು ವಿಶೇಷವಾಗಿತ್ತು. ಚಿನೂಕ್ ಹೆಲಿಕಾಪ್ಟರ್‌ಗಳು ಕೂಡ ಆಗಸದಲ್ಲಿ ಶಕ್ತಿ ಪ್ರದರ್ಶಿಸಿದವು. ಜೊತೆಗೆ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದ ಆರ್ಭಟವನ್ನು ಕಾರ್ಯಕ್ರಮದಲ್ಲಿ ನೆರೆದವರು ಕಣ್ತುಂಬಿಕೊಂಡರು.