ಬಳ್ಳಾರಿ: ಪಕ್ಷ ಬಿಡುವ ಬಗ್ಗೆ ನನ್ನ ಹೆಸರು ವಿನಾಕಾರಣ ಪ್ರಸ್ತಾಪವಾಗುತ್ತಿದೆ. ರಮೇಶ್ ಜಾರಕಿಹೊಳಿ ಸೇರಿದಂತೆ ಯಾರ ಜೊತೆಯೂ ನಾನು ಸಂಪರ್ಕದಲ್ಲಿಲ್ಲ. ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಎಲ್ಲಿಗೂ ಹೋಗಲ್ಲ ಎಂದು ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ ಸ್ಪಷ್ಟಪಡಿಸಿದ್ದಾರೆ. 

ರಮೇಶ್ ಜಾರಕಿಹೊಳಿ ಅವರ ರಾಜಕೀಯ ಅವರಿಗೆ. ನನಗೇನು ಸಂಬಂಧವಿದೆ? ಪದೇ ಪದೇ ನನ್ನ ಹೆಸರು ಯಾರು ಹರಿಬಿಡುತ್ತಿದ್ದಾರೋ ಗೊತ್ತಿಲ್ಲ. ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನಗೆ ಪಕ್ಷ ಇಷ್ಟೆಲ್ಲ ಸ್ಥಾನಮಾನ ನೀಡಿದ ಬಳಿಕವೂ ನಾನು ಹೇಗೆ ತಾನೆ ಬಿಜೆಪಿಗೆ ಹೋಗಲು ಸಾಧ್ಯ? ಎಂದು ಪ್ರಶ್ನಿಸಿದರು. 

ನನ್ನನ್ನು ತೇಜೋವಧೆ ಮಾಡಲು ವಿರೋಧಿಗಳು ಈ ತಂತ್ರ ಬಳಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.