ಬೆಳಗಾವಿ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಎಲ್ಲರೂ ನನ್ನ ಸಂಪರ್ಕದಲ್ಲಿದ್ದಾರೆ. ಅವರು ನಿತ್ಯ ಕರೆಯುತ್ತಿದ್ದಾರೆ. ಆದರೆ, ಅದೆಲ್ಲವನ್ನೂ ಹೇಳಲಾಗದು. ಆದರೆ, ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಶಾಸಕ ಉಮೇಶ್‌ ಕತ್ತಿ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಇತ್ತೀಚೆಗೆ ಸಚಿವ ಸತೀಶ್‌ ಜಾರಕಿಹೊಳಿ ಬಿಜೆಪಿ ಆಪರೇಷನ್‌ ಕಮಲ ಮಾಡಿದರೆ, ಕಾಂಗ್ರೆಸ್‌ ಮರು ಆಪರೇಷನ್‌ ಮಾಡುತ್ತದೆ ಎಂಬ ಹೇಳಿಕೆಗೆ ಈ ರೀತಿಯಲ್ಲಿ ತಿರುಗೇಟು ನೀಡಿದರು. ಬಿಜೆಪಿಗೆ ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಯಾರೇ ಬಂದರೂ ಸ್ವಾಗತಿಸುತ್ತೇವೆ. ರಾಜ್ಯದಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟುಅಧಿಕಾರಕ್ಕೆ ಬರಲಿದ್ದು, ಒಂದು ವಾರದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದರು.

ವಚನ ಭ್ರಷ್ಟರಾಗಿರುವ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆದಷ್ಟುಬೇಗನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ಬಿಜೆಪಿಗೆ ಬಂದರೆ ಸ್ವಾಗತ. ಒಬ್ಬ ಶಾಸಕ ರಾಜೀನಾಮೆ ನೀಡಿ, ಹೊರಬರುವುದು ಹುಡುಗಾಟಿಕೆಯಲ್ಲ. ಯಾರಿಗೂ ಮತ್ತೆ ಉಪಚುನಾವಣೆಗೆ ಹೋಗುವ ಇಚ್ಛೆ ಇರುವುದಿಲ್ಲ ಎಂದು ಹೇಳಿದರು.