ಮುಂಬೈಗೆ ಹೋಗಿರುವ ಬಿಜೆಪಿ ಶಾಸಕರ ಜೊತೆಗೆ ಸಚಿವರು ಕೂಡ ಇದ್ದಾರೆ ಎಂಬ ವದಂತಿಗಳಿಗೆ ಸ್ಪಷ್ಟೀಕರಣ ನೀಡಿದ ಸಚಿವ ಆರ್ .ಶಂಕರ್ ನಾನು ಬಿಜೆಪಿಗೆ ಹೋಗುವ ಬಗ್ಗೆ ಯೋಚಿಸಿಯೂ ಇಲ್ಲ ಎಂದು ಹೇಳಿದ್ದಾರೆ. 

ಉಡುಪಿ :  ನನ್ನನ್ನು ಬಿಜೆಪಿಯ ಯಾರೂ ಸಂಪರ್ಕಿಸಿಲ್ಲ, ನಾನು ಬಿಜೆಪಿಗೆ ಹೋಗುವ ಬಗ್ಗೆ ಯೋಚಿಸಿಯೂ ಇಲ್ಲ, ಸರ್ಕಾರಿ ಕಾರ್ಯಕ್ರಮಗಳ ನಡುವೆ ಅದನ್ನೆಲ್ಲಾ ಯೋಚಿಸುವುದಕ್ಕೆ ನನ್ನ ಬಳಿ ಸಮಯವೂ ಇಲ್ಲ ಎಂದು ಅರಣ್ಯ ಸಚಿವ ಶಂಕರ್‌ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಉಡುಪಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಂಬೈಗೆ ಹೋಗಿರುವ ಬಿಜೆಪಿ ಶಾಸಕರ ಜೊತೆಗೆ ಸಚಿವರು ಕೂಡ ಇದ್ದಾರೆ ಎಂಬ ವದಂತಿಗಳಿಗೆ ಸ್ಪಷ್ಟೀಕರಣ ನೀಡಿದರು. ನಾನು ನನ್ನ ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದೇನೆ. ನಾನು ಮುಂಬೈಗೆ ಹೋಗಿಲ್ಲ. ಹೋಗುವುದೂ ಇಲ್ಲ, ಯಾರು ಹೋಗುತ್ತಾರೋ ಗೊತ್ತಿಲ್ಲ ಎಂದರು.

ಸದ್ಯ ನಾನು ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿದ್ದೇನೆ. ಅಲ್ಲಿ ಬೆಂಗಳೂರಿನಲ್ಲಿ ಏನೇನು ರಾಜಕೀಯ ಬೆಳವಣಿಗೆಗಳು ಆಗಿದೆಯೋ ಗೊತ್ತಿಲ್ಲ, ಸುದ್ದಿಗಳು ಬರುತ್ತಿರುತ್ತವೆ, ಏನು ಮಾಡಲಿಕ್ಕಾಗುತ್ತದೆ ಎಂದರು.

‘‘ನಾನು ಒಂದು ವಾರದಿಂದ ಬೆಂಗಳೂರಿಗೆ ಹೋಗಿಲ್ಲ, ಕೊಪ್ಪಳದಲ್ಲಿ ಬ್ಯುಸಿ ಇದ್ದೆ, ಗಣಪತಿ ಹಬ್ಬದಲ್ಲಿ ಭಾಗವಹಿಸಿದ್ದೆ, ನನಗೆ ಕ್ಷೇತ್ರದ ಜನರಿಗೆ ಧನ್ಯವಾದ ಹೇಳಲೂ ಬಿಡುವಿಲ್ಲ, ಹಾಗಿರುವಾಗ ನನ್ನ ಗಮನಕ್ಕೆ ಬಾರದ, ಗೊತ್ತಿಲ್ಲದ ವಿಷಯ ಮಾತಾಡಲ್ಲ, ಯಾರು ಏನು ಮಾಡ್ತಾರೆ, ಬಿಡ್ತಾರೆ ಗೊತ್ತಿಲ್ಲ, ನಾನು ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ’’ ಎಂದ ಶಂಕರ್‌, ಸಮ್ಮಿಶ್ರ ಸರ್ಕಾರ ಸ್ಥಿರವಾಗಿರುತ್ತೆ, ಏನೂ ಆಗಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.