ಬೆಂಗಳೂರು :  ಕರ್ನಾಟಕದ ನೂತನ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮಗೆ ಸಿಕ್ಕ ಖಾತೆಯ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ತಮಗೆ ದೊರಕಿರುವುದು ಸಂತೋಷವಾಗಿದೆ ಎಂದು ಹೇಳಿದ್ದಾರೆ. 

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ತಮಗೆ ಯಾವ ಖಾತೆ ಕೊಟ್ಟರೂ ಕೂಡ ಉತ್ತಮವಾಗಿ ನಿಭಾಯಿಸುತ್ತೇನೆ. ಆದರೆ ಸದ್ಯ ಈ ಖಾತೆಯಲ್ಲಿ ತಮಗೆ ಯಾವುದೇ ಅನು ಭವವಿಲ್ಲ. ಆದರೆ ಈ ಖಾತೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಇತಿಹಾಸ ಸೃಷ್ಟಿಯಾಗುವಂತೆ ಕಾರ್ಯನಿರ್ವಹಿಸುವುದಾಗಿ ಅವರು ಈ  ವೇಳೆ ಭರವಸೆ  ನೀಡಿದ್ದಾರೆ. 

ಅಲ್ಲದೇ ಸಮ್ಮಿಶ್ರ ಸರ್ಕಾರದಲ್ಲಿ ದೇವೇಗೌಡರ ಮಾತನ್ನು ಕೇಳುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ರಾಜ್ಯದಲ್ಲಿ ಸಮಸ್ಯೆ ಇದ್ದಾಗ ಅವರ ಮಾತು ಕೇಳಬೇಕು. ಅವರೋರ್ವ ಮಾಜಿ ಪ್ರಧಾನಿ. ಖಾತೆ ಹಂಚಿಕೆಯಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಬ್ಬರೂ ಕೂಡ ಯಾವುದೇ ಪ್ರಭಾವ ಬೀರಿಲ್ಲ ಎಂದು ಅವರು ಹೇಳಿದ್ದಾರೆ. 

ಇಂಗ್ಲೀಷಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ‌ ವಿಚಾರಕ್ಕೆ ಕ್ಷಮೆ : ಇನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜಮೀರ್ ಅಹ್ಮದ್ ಅವರು ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಈ ಸಂಬಂಧ  ಮಾತನಾಡಿದ ಅವರು ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. 

ಕನ್ನಡ ಕಲಿಯದೇ ಇದ್ದಿದ್ದು ನನ್ನ ದುರಾದೃಷ್ಟ.  ತಂದೆ ತಾಯಿ ನನಗೆ ಕನ್ನಡ ಶಾಲೆಗೆ ಹಾಕಿಲ್ಲ. ಹಾಗಾಗಿ ಕನ್ನಡ ಓದು‌ ಸರಿಯಾಗಿ ಬಾರದ ಕಾರಣ ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದೆ.  ಈ ಬಗ್ಗೆ ರಾಜ್ಯದ ಜನತೆಗಿಂತ ದುಪ್ಪಟ್ಟು ನೋವು ನನಗಾಗಿದೆ. ನಾನು ಬೇಕಂತಲೇ ಇಂಗ್ಲೀಷ್ ಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರೆ ನನಗೆ ಗಲ್ಲು ಶಿಕ್ಷೆ ಕೊಡಲಿ. 

ಉದ್ದೇಶಪೂರ್ವಕವಾಗಿ ನಾನು ಈ ತಪ್ಪು ಮಾಡಿದ್ದಲ್ಲಿ ನನ್ನನ್ನು ದೇಶ ದ್ರೋಹಿ ಎಂದು ಕರೆಯಲಿ ಎಂದು ಸಿದ್ಧಗಂಗಾ ಮಠದಲ್ಲಿ ಜಮೀರ್ ಅಹಮದ್  ಹೇಳಿದ್ದಾರೆ.