ಬೆಂಗಳೂರು[ಸೆ.12]: ‘ನಾನು ಯಾವುದೇ ಸಂಘಟನೆ ಸೇರ್ಪಡೆಯಾಗಿಲ್ಲ. ನನ್ನ ರಾಜೀನಾಮೆ ಅಂಗೀಕಾರವಾದ ಬಳಿಕ ಮುಂದಿನ ದಾರಿ ಬಗ್ಗೆ ಬಹಿರಂಗಪಡಿಸುತ್ತೇನೆ’ ಎಂದು ಇತ್ತೀಚೆಗೆ ಐಪಿಎಸ್‌ ಹುದ್ದೆ ತೊರೆದಿರುವ ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾಮಲೈ ಅವರು ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಸೇರ್ಪಡೆಗೊಂಡು ತಮಿಳುನಾಡಿನಲ್ಲಿ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ನಾನು ಸಂಘಟನೆಯೊಂದಕ್ಕೆ ಸೇರಿದ್ದೇನೆ ಎಂಬುದೆಲ್ಲ ಸುಳ್ಳು ಎಂದಿದ್ದಾರೆ. ನಾನು ಒಂದು ಧರ್ಮದ ಪರ ನಿಂತಿದ್ದೇನೆ ಎಂದೂ ಯಾರೂ ಅಪಾರ್ಥ ಮಾಡಿಕೊಳ್ಳಬಾರದು. ನನ್ನ ರಾಜೀನಾಮೆಯನ್ನು ಸರ್ಕಾರವು ಅಧಿಕೃತವಾಗಿ ಸ್ವೀಕರಿಸಿದ ಬಳಿಕ ನನ್ನ ಭವಿಷ್ಯದ ಹೆಜ್ಜೆಗಳು ಮತ್ತು ನಿಲುವನ್ನು ಸ್ಪಷ್ಟಡಿಸುತ್ತೇನೆ. ಅಲ್ಲಿಯವರಿಗೆ ಯಾವುದೇ ರೀತಿಯ ಊಹಾಪೋಹಗಳಿಂದ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದರು.

ಸೇವಾಪರ್ವ ಕೊನೆಗೊಳಿಸಿದ IPS ಅಣ್ಣಾಮಲೈ

ನಾನು ಸಂಘಟನೆಯೊಂದಕ್ಕೆ ಸೇರಿ ಕೊಯಮತ್ತೂರಿನಲ್ಲಿ ಅದರ ಶಾಖೆ ತೆರೆದಿದ್ದೇನೆ ಎಂದೆಲ್ಲಾ ವದಂತಿಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಎಲ್ಲಾ ಸಂಗತಿಗಳು ಸತ್ಯಕ್ಕೆ ದೂರವಾದದ್ದು. ನಾನು ಇದುವರೆಗೆ ಯಾವುದೇ ಸಂಘಟನೆಗೂ ಸೇರಿಲ್ಲ. ನಾನು ಐಪಿಎಸ್‌ ಹುದ್ದೆಗೆ ನೀಡಿರುವ ರಾಜೀನಾಮೆ ಕೇಂದ್ರ ಸರ್ಕಾರದಿಂದ ಅಂಗೀಕೃತವಾಗಿಲ್ಲ. ಹಾಗಾಗಿ ನಾನು ಈಗಲೂ ಸಹ ಸರ್ಕಾರದ ಭಾಗವಾಗಿದ್ದೇನೆ. ಹುದ್ದೆ ತೊರೆದ ಬಳಿಕ ನಿರ್ದಿಷ್ಟವಾದ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ಸದ್ಯ ನಾನು ಪ್ರಯಾಣ ಮತ್ತು ಸ್ನೇಹಿತರ ಭೇಟಿಯಲ್ಲಿ ಸಮಯ ಕಳೆಯುತ್ತಿದ್ದೇನೆ. ದೇಶದ ಎಲ್ಲಾ ಪ್ರಮುಖ ಧರ್ಮಗಳ ಧಾರ್ಮಿಕ ಪ್ರಮುಖರನ್ನು ಭೇಟಿ ಮಾಡಿ ನನ್ನ ನಂಬಿಕೆ ಹಾಗೂ ಅರಿವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದ್ದೇನೆ ಎಂದು ತಿಳಿಸಿದರು.