ಮೈಸೂರು[ಮೇ.23]: ರಾಜ್ಯದಲ್ಲಿ ಸರ್ಕಾರದ ವತಿಯಿಂದ ಒಂದು ಸಾವಿರ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನಿರ್ಧಾರಕ್ಕೆ ಸ್ವತಃ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ಸಂಬಂಧ ಸರ್ಕಾರ ಶಾಲೆಗಳ ಪಟ್ಟಿಬಿಡುಗಡೆ ಮಾಡಿದ ಮರುದಿನವೇ ಸಿದ್ದರಾಮಯ್ಯ ಈ ಆಕ್ಷೇಪ ತೆಗೆದಿದ್ದಾರೆ, ಜತೆಗೆ, ಈ ಸಂಬಂಧ ಕುಮಾರಸ್ವಾಮಿ ಅವರ ಜತೆಗೂ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

ಮೈಸೂರಿನ ರಾಮಕೃಷ್ಣನಗರದಲ್ಲಿ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ಸ್ಥಾಪಿಸಿರುವ ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜು ಕಟ್ಟಡವನ್ನು ಬುಧವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಈ ವಿಚಾರ ತಿಳಿಸಿದರು.

ರಾಜ್ಯದ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಜಾರಿಗೆ ತರಲು ಪ್ರಸ್ತಾಪಿಸಿದಾಗಲೇ ನಾನು ವಿರೋಧ ಮಾಡಿದ್ದೇನೆ. ಅಂದಿನ ಶಿಕ್ಷಣ ಸಚಿವ ಎನ್‌. ಮಹೇಶ್‌ ಅವರಿಗೂ ಸೂಚಿಸಿದ್ದೆ. ನಮ್ಮ ಮಕ್ಕಳು ಮಾತೃ ಭಾಷಾ ಮಾಧ್ಯಮದಲ್ಲೇ ಶಿಕ್ಷಣ ಪೂರೈಸಬೇಕು. ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿತರೆ ಅಡ್ಡಿಯಿಲ್ಲ, ಆದರೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲೆ ಪ್ರಾಥಮಿಕ ಶಿಕ್ಷಣ ನೀಡುವ ಪದ್ಧತಿಗೆ ನನ್ನ ವೈಯಕ್ತಿಕ ವಿರೋಧವಿದೆ. ಈ ಬಗ್ಗೆ ಸರ್ಕಾರದೊಂದಿಗೆ ಮಾತನಾಡುತ್ತೇನೆ. ನೆಲ, ಜಲ, ಭಾಷೆ ವಿಚಾರದಲ್ಲಿ ನಾನು ಎಂದಿಗೂ ರಾಜಿಯಾಗುವುದಿಲ್ಲ ಎಂದರು.

ಏಕರೂಪ ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯ:

ಇದೇ ವೇಳೆ ರಾಷ್ಟ್ರದಲ್ಲಿ ಏಕರೂಪ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕೆಂದು ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ, ಏಕರೂಪ ಶಿಕ್ಷಣ ವ್ಯವಸ್ಥೆಯಿಂದ ಸಾಮಾಜಿಕ ಸಮಾನತೆ ಕಾಣಬಹುದು ಎಂದರು. ಆರ್ಥಿಕ, ಸಾಮಾಜಿಕ ಸಮಾನತೆ ಬಂದರೆ ಸಮಾಜ ಬದಲಾಗುತ್ತದೆ. ಕ್ರಮೇಣ ಜಾತೀಯತೆಯೂ ಹೋಗುತ್ತದೆ. ಅದಕ್ಕೆ ಮಾತೃ ಭಾಷಾ ಮಾಧ್ಯಮವೂ ಕಾರಣವಾಗಬಹುದು. ಈ ನಿಟ್ಟಿನಲ್ಲಿ ದೇಶಾದ್ಯಂತ ಏಕರೂಪ ಶಿಕ್ಷಣ ಜಾರಿಗೆ ಬರಬೇಕು. ಸುಪ್ರೀಂ ಕೋರ್ಟ್‌ ಪ್ರಾಥಮಿಕ ಶಿಕ್ಷಣ ಮಾಧ್ಯಮವನ್ನು ಪೋಷಕರು ನಿರ್ಧರಿಸುತ್ತಾರೆ ಎಂಬ ತೀರ್ಪು ನೀಡಿದ ಕೂಡಲೇ ನಾನು ಪ್ರಧಾನಿಗಳಿಗೆ ಪತ್ರ ಬರೆದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಂವಿಧಾನ ತಿದ್ದುಪಡಿ ತರುವಂತೆ ಕೋರಿದ್ದೆ. ಇದುವರೆಗೂ ಅದು ಈಡೇರಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.