ಬಾದಾಮಿ[ಸೆ.06]: ದೇಶದಲ್ಲಿ ರೈತ, ಶಿಕ್ಷಕ ಮತ್ತು ಸೈನಿಕರಿಗೆ ಗೌರವದ ಸ್ಥಾನ ನೀಡಲಾಗಿದೆ. ಅದರಲ್ಲಿ ಶಿಕ್ಷಕರು ಮಕ್ಕಳಲ್ಲಿ ಜಾತ್ಯತೀತ ಮನೋಭಾವನೆ ಬೆಳೆಸಬೇಕು ಎಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಹೇಳಿದರು.

ಗುರುವಾರ ನಗರದ ಹೇಮರೆಡ್ಡಿ ಸಭಾಭವನದಲ್ಲಿ ತಾಲೂಕು ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು 1980ರಲ್ಲಿ ಮೂರು ವರ್ಷ ಅತಿಥಿ ಶಿಕ್ಷಕನಾಗಿ ಕೆಲಸವನ್ನು ಮಾಡಿದ್ದೇನೆ. ನಂತರ ವಕೀಲ ವೃತ್ತಿಯಿಂದ ರಾಜಕೀಯ ಪ್ರಾರಂಭಿಸಿದೆ. ಆದರೆ ಶಿಕ್ಷಕ ವೃತ್ತಿಯಲ್ಲಿರುವ ತೃಪ್ತಿ ರಾಜಕೀಯದಲ್ಲಿಲ್ಲ ಎಂದರು.

ನಾನು ಪ್ರಾಥಮಿಕ ಹಂತದಲ್ಲಿರುವಾಗ ಜನಪದ ನೃತ್ಯವನ್ನು ಮಾಡುತ್ತಿದ್ದೆ. ಆವಾಗ ನನ್ನ ನೆಚ್ಚಿನ ರಾಜಪ್ಪ ಮೇಷ್ಟು್ರ ನನ್ನ ತಂದೆಗೆ ಹೇಳಿ ನೇರವಾಗಿ ನನ್ನನ್ನು 5ನೇ ತರಗತಿಗೆ ಸೇರಿಸಿದರು. ಜತೆಗೆ ವಿದ್ಯಾವಂತರನ್ನಾಗಿಯೂ ಮಾಡಿದರು. ಇದರಿಂದ ಮುಂದೆ ಪದವಿಯನ್ನು ಮುಗಿಸಿ ಕೆಲವು ದಿನ ವಕೀಲ ವೃತ್ತಿಯನ್ನು ಮಾಡಿದೆ. ಈ ರಾಜ್ಯದ ಮುಖ್ಯಮಂತ್ರಿಯಾಗಲು ಪ್ರಮುಖ ಕಾರಣ ನಮ್ಮ ರಾಜಪ್ಪ ಮೇಷ್ಟು್ರ ಎಂದು ತಮ್ಮ ಶೈಕ್ಷಣಿಕ ಜೀವನದ ಬಗ್ಗೆ ಸ್ಮರಿಸಿದರು.

ರಾಜಪ್ಪ ಮೇಷ್ಟು್ರ ಯಾರೂ ಶಾಲೆಗೆ ಸೇರುತ್ತಿರಲಿಲ್ಲ ಅವರನ್ನು ಮನೆಗೆ ಕರೆದುಕೊಂಡು ಬಂದು ವಿದ್ಯೆ ಹೇಳುತ್ತಿದ್ದರು. ಅದರಂತೆ ಈಶ್ವರಾಚಾರ್ಯ ಮೇಷ್ಟು್ರ ಕೂಡ ಕನ್ನಡದ ವ್ಯಾಕರಣ ಬಗ್ಗೆ ಪಾಠ ಮಾಡಿದ್ದಾರೆ. ಅದು ಈಗಲೂ ನೆನಪಿದ್ದು, ಅವರ ಮನೆಗೇ ಪಾಠ ಹೇಳಿಸಿಕೊಳ್ಳಲು ಹೋಗುತ್ತಿದ್ದೆ ಎಂದರು.

ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿಷಯಗಳು ಈಗಲೂ ನೆನಪಿನಲ್ಲಿವೆ. ಒಂದು ಸಾರಿ ವಿಧಾನಸೌಧದಲ್ಲಿ ಅಧಿವೇಶನದ ಸಂದರ್ಭದಲ್ಲಿ ಸಂಧಿ ಎಂದರೇನು ಎಂದು ಕೇಳಿದ್ದೆ. ಶಿಕ್ಷಣ ಸಚಿವರು, ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾಗಿ ಬಂದ ಎಂಎಲ್‌ಸಿಯವರನ್ನೂ ಕೇಳಿದ್ದೆ. ಅವರಿಗೆ ಬರದಿಲ್ಲದ ಕಾರಣ ನಾನು ಮನವರಿಕೆ ಮಾಡಿ ಹೇಳಿದ್ದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಅಲ್ಲಿ ನೆರೆದಿದ್ದ ಶಿಕ್ಷಕರು ಹಾಸ್ಯದಲ್ಲಿ ತೊಡಗಿದರು.

6ನೇ ವೇತನ ಜಾರಿ:

ಮಕ್ಕಳ ಮನೋಭಾವನೆಯನ್ನು ಅರಿತುಕೊಂಡು ಉತ್ತಮವಾದ ಜ್ಞಾನವನ್ನು ನೀಡಿ ವರ್ಗದಲ್ಲಿರುವ ಎಲ್ಲ ವಿದ್ಯಾರ್ಥಿಗಳ ಕಡೆ ಹೆಚ್ಚು ಗಮನವನ್ನು ಹರಿಸಿ ಎಲ್ಲರ ಮನಸ್ಥಿತಿ ಅರಿತು ಮಕ್ಕಳಿಗೆ ಪ್ರೋತ್ಸಾಹವನ್ನು ನೀಡಬೇಕು. ಹೀಗಾಗಿ ಶಿಕ್ಷಕರು ಯಾವಾಗಲು ಶಿಸ್ತುಬದ್ಧವಾಗಿರಬೇಕು. ಮಕ್ಕಳು ನಾವು ಮಾಡುವ ಎಲ್ಲ ಚಟುವಟಿಕೆಗಳನ್ನು ಅನುಕರಣೆ ಮಾಡುತ್ತಾರೆ. ಶಿಕ್ಷಕರಲ್ಲಿ ಹೆಚ್ಚು ಅಧ್ಯಯನಶೀಲತೆ ಇರಬೇಕು. ಮಕ್ಕಳಿಗೆ ಎಲ್ಲ ವಿಷಯಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಬೇಕು ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಮಕ್ಕಳಿಗೆ ಹಾಲು ಮತ್ತು ಶೂ ಭಾಗ್ಯವನ್ನು ನೀಡಿದ್ದೆ. ಬಡ ಮಕ್ಕಳು ಎಲ್ಲರಂತೆ ಇರಲಿ ಎಂಬ ಮನೋಭಾವನೆಯಿಂದ ಯೋಜನೆಯನ್ನು ಜಾರಿ ಮಾಡಿದ್ದೆ. ಶಿಕ್ಷಕರಲ್ಲಿ ಅಪಾರವಾದ ವಾತ್ಸಲ್ಯದಿಂದ ನನ್ನ ಅವಧಿಯಲ್ಲಿ 6ನೇ ವೇತನ ಜಾರಿ ಮಾಡುವುದರ ಮೂಲಕ .10,655 ಕೋಟಿ ಮಂಜೂರು ಮಾಡಿದ್ದೆ. ನಮ್ಮಪ್ಪನ ಮನೆಯಿಂದ ದುಡ್ಡೇನು ನಾನು ಕೊಡಲಿಲ್ಲ. ಸರ್ಕಾರದಿಂದ 6ನೇ ವೇತನ ಆಯೋಗ ವರದಿ ಜಾರಿ ಮಾಡಿದೆ. ಶಿಕ್ಷಕರಿಗೆ ಸಂಬಳ ಬಿಟ್ಟು ಬೇರೆಯೇನೂ ಇಲ್ಲವಲ್ಲ. ಅವರೂ ಬದುಕಬೇಕಲ್ಲ. ಆದರೆ ಶಿಕ್ಷಕರ ಸಂಬಳದಲ್ಲೂ ಬೇರೆಯವರು ಕಿತ್ತು ಕೊಳ್ತಾರೆಂದು ನನಗೆ ಗೊತ್ತಿಲ್ಲ ಎಂದು ವಿಷಾದಿಸಿದರು.

ವೇದಿಕೆಯಲ್ಲಿ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ, ತಾಪಂ ಅಧ್ಯಕ್ಷೆ ರೇಣುಕಾ ಕೊಳ್ಳನ್ನವರ, ಉಪಾಧ್ಯಕ್ಷೆ ಪೂರ್ಣಿಮಾ ಪಾಟೀಲ, ಜಿಪಂ ಸದಸ್ಯರಾದ ಸರಸ್ವತಿ ಮೇಟಿ, ಇಂದ್ರವ್ವ ನಾಯ್ಕರ, ಆಸಂಗೆಪ್ಪ ನಕ್ಕರಗುಂದಿ, ಶಶಿಕಲಾ ಯಡಳ್ಳಿ, ಹೊಳಬಸು ಶೆಟ್ಟರ, ಭೀಮಶೇನ ಚಿಮ್ಮನಕಟ್ಟಿ, ಎಂ.ಡಿ. ಯಲಿಗಾರ, ಮಹೇಶ ಹೊಸಗೌಡರ, ಮಾಹಾಂತೇಶ ಹಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್‌. ಹತ್ತಳ್ಳಿ, ಸೇರಿದಂತೆ ಸರಕಾರಿ ಅಧಿಕಾರಿಗಳು ಮುಖಂಡರು ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ, ಶಿಕ್ಷಕಿಯರು ಭಾಗವಹಿಸಿದ್ದರು ಬಸಮ್ಮಾ ನರಸಾಪೂರ ನಿರೂಪಿಸಿ ವಿವೇಕಾನಂದ ಮೇಟಿ ವಂದಿಸಿದರು

1 ಲಕ್ಷ ನೆರೆ ಸಂತ್ರಸ್ತರಿಗೆ

ಈ ಸಂದರ್ಭದಲ್ಲಿ ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಶಿಕ್ಷಕರ ದಿನಾಚರಣೆಯನ್ನು ತಾಲೂಕಿನಲ್ಲಿ ಸರಳವಾಗಿ ಆಚರಿಸುವುದರ ಮೂಲಕ ಅದರಲ್ಲಿ ಉಳಿದ .1 ಲಕ್ಷ ಚೆಕ್‌ನ್ನು ಶಾಸಕರ ಮುಖಾಂತರ ತಹಸೀಲ್ದಾರ್‌ ಅವರಿಗೆ ಹಸ್ತಾಂತರಿಸಲಾಯಿತು. ತಾಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಡಶಾಲೆಯಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತಿಯನ್ನು ಹೊಂದಿದ ಶಿಕ್ಷಕರಿಗೆ ಸನ್ಮಾನಿಸಲಾಯಿತು.