ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಶೀತಲ ಸಮರವೂ ಇಲ್ಲ, ಬಿಸಿ ಸಮರವೂ ಇಲ್ಲ. ವಿರೋ‘ ಪಕ್ಷಗಳು ಇಂತಹ ಎಷ್ಟೇ ಅಪಪ್ರಚಾರ ನಡೆಸಿದರೂ 2018ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯಲು ಒಟ್ಟಾಗಿ ದುಡಿಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ|ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು(ಸೆ.04): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಶೀತಲ ಸಮರವೂ ಇಲ್ಲ, ಬಿಸಿ ಸಮರವೂ ಇಲ್ಲ. ವಿರೋ‘ ಪಕ್ಷಗಳು ಇಂತಹ ಎಷ್ಟೇ ಅಪಪ್ರಚಾರ ನಡೆಸಿದರೂ 2018ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯಲು ಒಟ್ಟಾಗಿ ದುಡಿಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ|ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಜತೆ ನನಗೆ ಯಾವುದೇ ಮನಸ್ತಾಪ ಹಾಗೂ ಭಿನ್ನಾಭಿಪ್ರಾಯವಿಲ್ಲ. ಅಸಮಧಾನಗೊಂಡು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪರಮೇಶ್ವರ್ ರಾಜೀನಾಮೆ ನೀಡುತ್ತಾರೆ ಎಂದು ಕೆಲವರು ಹಸಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅಂತಹ ಯಾವುದೇ ಪ್ರಮೇಯ ನನಗೆ ಒದಗಿ ಬಂದಿಲ್ಲ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂದರು.

ನೂತನ ಸಚಿವರ ಪಟ್ಟಿಯನ್ನು ನಾನು, ಮುಖ್ಯಮಂತ್ರಿಗಳು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಚರ್ಚಿಸಿ ಸಿದ್ಧಪಡಿಸಿದ್ದೆವು. ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮದ ವೇಳೆ ಜ್ವರ ಹಾಗೂ ಕೆಮ್ಮು ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಗೈರು ಹಾಜರಾಗಿದ್ದೆ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಜೊತೆ ಚರ್ಚಿಸದೆ ಏನನ್ನೂ ಮಾಡಿಲ್ಲ. ಯಾವುದಾದರೂ ನಿರ್ಣಯ ತೆಗೆದುಕೊಳ್ಳುವಾಗ ಇಬ್ಬರೂ ಸುದೀರ್ಘವಾಗಿ ಚರ್ಚಿಸುತ್ತೇವೆ. ನೂತನ ಸಚಿವರ ನೇಮಕದ ವಿಚಾರವಾಗಿಯೂ ಈ ಸಂಪ್ರದಾಯ ಪಾಲಿಸಿದ್ದೇವೆ ಎಂದು ಹೇಳಿದರು.

ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಆರೂವರೆ ವರ್ಷದಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಗೃಹ ಸಚಿವನಾಗಿಯೂ ಅವರ ಜತೆಗೆ ಕೆಲಸ ಮಾಡಿದ್ದೇನೆ. ಹಲವು ಹಂತಗಳಲ್ಲಿ ಜವಾಬ್ದಾರಿ ಹಂಚಿಕೊಂಡು ಕೆಲಸ ಮಾಡಿದ್ದೇವೆ. ಇದೀಗ ಹಬ್ಬಿರುವ ಸುಳ್ಳು ಸುದ್ದಿಯಲ್ಲಿ ವಿಪಕ್ಷಗಳ ಕೈವಾಡವಿದೆ ಎಂದು ದೂರಿದರು.

ಸಚಿವ ಸಂಪುಟ ವಿಸ್ತರಣೆ ವೇಳೆ ದಲಿತ ಸಮುದಾಯದಲ್ಲೇ ಉಂಟಾದ ತಿಕ್ಕಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಎಡ-ಬಲ ಯಾವುದೇ ಭೇದವಿಲ್ಲ. ಪಕ್ಷದ ಸಂವಿಧಾನ ಹಾಗೂ ಹೈಕಮಾಂಡ್ ಆದೇಶಕ್ಕೆ ತಕ್ಕಂತೆ ಕೆಲಸ ಮಾಡುವುದು ನಮ್ಮ ಮುಂದಿರುವ ಕರ್ತವ್ಯ. ನಾವು ತ್ಯಾಗ ಮಾಡಿದ್ದೇವೆ ಎಂದು ಹೇಳಬಹುದು. ಆದರೆ ಉದ್ದೇಶ ಮುಂದಿನ ಬಾರಿಗೂ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವುದಷ್ಟೇ ಎಂದು ಹೇಳಿದರು.

ನೂತನ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ರಾಮಲಿಂಗಾರೆಡ್ಡಿ ನನ್ನ ಬಳಿ ಬಂದಾಗ ಅಭಿನಂದಿಸಿದ್ದೇನೆ. ಚುನಾವಣೆ ವೇಳೆಯಲ್ಲಿ ಬಿಜೆಪಿಯವರು ಕೋಮು ಸೌಹಾರ್ದತೆ ಹಾಳು ಮಾಡುವಂತಹ ಕೆಲಸ ಮಾಡುತ್ತಾರೆ. ಇಂತಹವರ ವಿರುದ್ಧ ಎಚ್ಚರದಿಂದ ಇರಬೇಕು. ಗುಪ್ತಚರ ಇಲಾಖೆ ಯನ್ನು ಚುರುಕುಗೊಳಿಸಬೇಕು. ರಾಜಕೀಯ ಸಂಚು ನಡೆಸುವವರನ್ನು ಎದುರಿಸಬೇಕು ಎಂದು ಸಲಹೆ ನೀಡಿದ್ದೇನೆ ಎಂದು ಹೇಳಿದರು.