ಮಿಕ (ಕಾಡುಹಂದಿ) ಮಾಂಸಕ್ಕೂ, ದನದ ಮಾಂಸಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಗೋಮಾಂಸ ಸೇವನೆ ತಪ್ಪಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಆನಂದಪುರ:
ಮಿಕ (ಮೃಗ) ಮಾಂಸಕ್ಕೂ, ದನದ ಮಾಂಸಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಗೋಮಾಂಸ ಸೇವನೆ ತಪ್ಪಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ಬಸ್ ನಿಲ್ದಾಣ ಆವರಣದಲ್ಲಿ ನಡೆದ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅದಕ್ಕೂ ನಾಲ್ಕು ಕಾಲಿದೆ. ದನಕ್ಕೂ ನಾಲ್ಕು ಕಾಲಿದೆ. ಎರಡು ಕೊಂಬು ಇದೆ. ಬಾಲ ಇದೆ. ಕಾಡು ಹಂದಿ ತಿನ್ನುವಾಗ ಇರದ ಅಳಕು ದನದ ಮಾಂಸ ತಿನ್ನುವಾಗ ಏಕೆ? ನಾನೂ ಕೂಡ ತಿಂದಿದ್ದೇನೆ. ಅದಕ್ಕೂ, ಇದಕ್ಕೂ ಏನೂ ವ್ಯತ್ಯಾಸ ಇಲ್ಲ. ಬಿಜೆಪಿಯವರು ಇಂತಹ ವಿಚಾರದಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯ ಸಮಾನತೆ ಹೋರಾಟದ ಹಾದಿಯಿಂದ ಬಂದದ್ದು ಮಲೆನಾಡಿನ ಈ ಭಾಗದಲ್ಲಿ ಹಿಂದೆ ಹೋರಾಟದ ಮೂಲಕ ರೈತರಿಗೆ ಉಳುವವನೇ ಹೊಲದೊಡೆಯ ಕಾರ್ಯಕ್ರಮದ ಮೂಲಕ ರೈತನಿಗೆ ನ್ಯಾಯ ದೊರಕಿಸಿ ಕೊಟ್ಟ ಸರ್ಕಾರ ನಮ್ಮದು ಎಂದರು.
ಸಿಗಂದೂರಿನ ದೇವಿಗಾಗಲಿ, ಧರ್ಮಸ್ಥಳದ ಮಂಜುನಾಥನಿಗಾಗಲಿ ಪೂಜೆ ಮಾಡಿ ಗೆಲುವು ಸಾಧಿಸಿದವರು ನಾವಲ್ಲ. ಸಾಮಾಜಿಕ ಹಿನ್ನೆಲೆ, ಜನಪರ ಹೋರಾಟದ ಹಿನ್ನೆಲೆಯಿಂದ ರಾಜಕೀಯಕ್ಕೆ ಬಂದವರು. ರಾಜಕೀಯಕ್ಕಾಗಿ ಧರ್ಮ, ಜಾತಿ-ಜಾತಿ ನಡುವೆ ಹಾಗೂ ಗೋವಿನ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆಯಬಾರದು ಸಮಾಜ ಕಟ್ಟುವ ಕೆಲಸ ಎಲ್ಲರಿಂದ ಆಗಬೇಕು ಎಂದು ತಿಳಿಸಿದರು.
4 ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆ-ಮನೆಗೆ ತಲುಪಿಸುವ ಕಾರ್ಯಕ್ರಮ ಇದಾಗಿದ್ದು ಈ ಕಾರ್ಯಕ್ರಮದ ಮೂಲಕ ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿ ಸರ್ಕಾರ ರಚಿಸುವುದು ನಿಶ್ಚಿತ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿ.ನಾ. ಶ್ರೀನಿವಾಸ್, ಎಲ್.ಟಿ. ಹೆಗಡೆ, ವೆಂಕಟಮುನಿ, ರಾಜ್ಯ ಕೈಗಾರಿಕಾ ನಿಗಮ ನಿರ್ದೇಶಕ ಹೊನಗೋಡು ರತ್ನಾಕರ ಗ್ರಾಪಂ ಅಧ್ಯಕ್ಷೆ ಜಯಮ್ಮ ರಾಮು, ತಾಪಂ ಸದಸ್ಯೆ ಆನಂದಿ ಲಿಂಗರಾಜ್, ಹೇಮಾ ರಾಜಪ್ಪ, ಕಾಗೋಡು ಅಣ್ಣಾಜಿ, ಭರ್ಮಪ್ಪ, ಬಿ.ಆರ್. ಜಯಂತ್, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಇತರರಿದ್ದರು.
ಸಚಿವರ ಹೇಳಿಕೆಗೆ ಚೇತನ್‌ರಾಜ್ ಖಂಡನೆ
ಆನಂದಪುರ: ಅಲ್ಪಸಂಖ್ಯಾತರ ಓಲೈಕೆಗಾಗಿ ಗೋಮಾಂಸ ಸೇವನೆ ಸಮರ್ಥಿಸಿಕೊಂಡ ಸಚಿವ ಕಾಗೋಡು ತಿಮ್ಮಪ್ಪನವರ ಹೇಳಿಕೆ ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಸಾಗರ ಎಪಿಎಂಸಿ ಸದಸ್ಯ ಚೇತನ್‌ರಾಜ್ ಕಣ್ಣೂರು ತೀವ್ರವಾಗಿ ಖಂಡಿಸಿದ್ದಾರೆ. 4 ಕಾಲಿನ ಕುರಿ ಮಿಕ ಹಂದಿ ರೀತಿಯಲ್ಲಿಯೇ ಗೋ ಮಾಂಸವೂ ಒಂದಾಗಿದ್ದು, ನಾನೂ ಗೋ ಮಾಂಸ ತಿಂದಿದ್ದೇನೆ ಎಂದು ಚುನಾವಣಾ ಕಾರಣ, ಅಲ್ಪಸಂಖ್ಯಾತರ ಓಲೈಕೆಗಾಗಿ ಸಾರ್ವಜನಿಕವಾಗಿ ಈ ರೀತಿ ಹೇಳಿಕೆ ನೀಡಿರುವುದನ್ನು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟಿಸುವುದಾಗಿ ತಿಳಿಸಿದರು.
