ದುಬೈ[ಆ.05]: ದುಬೈನಲ್ಲಿ ಉದ್ಯೋಗ ಹುಡುಕಲು ವಿಫಲನಾಗಿ ನಿರಾಶೆಯಿಂದ ಮನೆಗೆ ಮರಳಿದ್ದ ಭಾರತೀಯ ರೈತನೊಬ್ಬ ದುಬೈನಲ್ಲಿ ಬರೋಬ್ಬರಿ 27 ಕೋಟಿ ರು.ನ ಲಾಟರಿ ಗೆದ್ದುಕೊಂಡಿದ್ದಾನೆ.

ಹೈದರಾಬಾದ್‌ ನಿವಾಸಿಯಾದ ವಿಲಾಸ್‌ ರಿಕ್ಕಾಲಾ ಎನ್ನುವವರು ದುಬೈನಿಂದ ನಾಲ್ಕು ದಿನಗಳ ಹಿಂದೆ ತವರಿಗೆ ಮರಳಿದ್ದರು. ಉದ್ಯೋಗ ಹುಡುಕಲು ವಿಫಲವಾಗಿದ್ದರಿಂದ ಪತ್ನಿಯಿಂದ 20 ಸಾವಿರ ರು. ಪಡೆದು ಸ್ನೇಹಿತ ರವಿ ಎಂಬಾತನಿಗೆ ನೀಡಿದ್ದರು.

ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ರವಿ, ರಿಕ್ಕಾಲಾ ಹೆಸರಿನಲ್ಲಿ ಮೂರು ಲಾಟರಿ ಟಿಕೆಟ್‌ಗಳನ್ನು ಪಡೆದಿದ್ದ. ಶನಿವಾರದಂದು ಲಾಟರಿ ಗೆದ್ದಿರುವ ಬಗ್ಗೆ ಯುಎಇಯ ಬಿಗ್‌ ಟಿಕೆಟ್‌ ಲಾಟರಿ ಸಂಸ್ಥೆ ರಿಕ್ಕಾಲಾಗೆ ಮಾಹಿತಿ ನೀಡಿದೆ.ಈ ಹಿಂದೆ ದುಬೈನಲ್ಲಿ ಕಾರು ಚಾಲಕನಾಗಿ ಕಾರ್ಯನಿರ್ವಹಿಸಿದ್ದ ರಿಕ್ಕಾಲಾ ಎರಡು ವರ್ಷಗಳ ಕಾಲ ವಿವಿಧ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು. ಆದರೆ, ಒಮ್ಮೆಯೂ ಅದೃಷ್ಟ ಒಲಿದಿರಲಿಲ್ಲ.