ಆಕೆ ಪೋಷಕರು ಇಲ್ಲದ ಕಾರಣಕ್ಕೆ ತನ್ನ ೧೫ನೇ ವಯಸ್ಸಿನಲ್ಲೇ  ಸಂಬಂಧಿಕರು ತೋರಿಸಿದ ತನಗಿಂತಲೂ ಹಿರಿಯ ವಯಸ್ಸಿನ ವ್ಯಕ್ತಿಯ ಜೊತೆ ವಿವಾಹವಾಗಿದ್ದಳು. ಆದರೆ ತನ್ನ ಗಂಡ ಒಬ್ಬ ವೇಶ್ಯಾವಾಟಿಕೆ ನಡೆಸುವ ಪಿಂಪ್ ಎಂಬುದು ತಡವಾಗಿ ತಿಳಿದಾಗ ವಿಧಿಯಿಲ್ಲದೆ ಹತ್ತು ವರ್ಷಗಳ ಕಾಲ ಒತ್ತಾಯದ ಜೀವನ ನಡೆಸಿದಳು. ಆದರೆ ಆ ಪಾಪಿ ಗಂಡ ಆಕೆಯ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳಲು ಮುಂದಾದಾಗ ಆಕೆ ಮಾಡಿದ್ದಾದರೂ ಏನು ಗೊತ್ತಾ? ಈ ವರದಿ ನೋಡಿ.

ಚಿತ್ರದುರ್ಗ(ಆ.16): ಈ ಮಹಿಳೆಗೆ ಕಳೆದ 10 ವರ್ಷಗಳಿಂದ ನೆಮ್ಮದಿಯೇ ಇಲ್ಲದಂತಾಗಿದೆ. ತನಗರಿವಿಲ್ಲದ ವಯಸ್ಸಿನಲ್ಲೇ ತನಗಿಂತ ಹಿರಿಯ ವಯಸ್ಸಿನ ವ್ಯಕ್ತಿ ಜೊತೆ ಮದುವೆಯಾಗಿದ್ದ ಅಮಾಯಕ ಹೆಣ್ಣು ಮಗಳು ಈಕೆ. ಮದುವೆಯಾದ ಸಂದರ್ಭದಲ್ಲಿ ಕೇವಲ ೧೫ ವರ್ಷದವಳಾಗಿದ್ದ ಈ ಅಮಾಯಕ ಹೆಣ್ಣು ಮಗಳು, ತಂದೆ, ತಾಯಿ ಹಾಗೂ ಅಣ್ಣನನ್ನ ಕಳೆದುಕೊಂಡು ಅಕ್ಷರಸಃ ಅನಾಥಳಾಗಿದ್ದಾಳೆ. ಇದನ್ನೇ ಬಂಡವಾಳ ಮಾಡಿಕೊಂಡ ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮದ ತಿಪ್ಪೇಸ್ವಾಮಿ ಎಂಬಾತ, ಈಕೆಯನ್ನ 10ವರ್ಷಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತನ್ನ ಗಂಡ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡಿರುವುದು ತಿಳಿದಾಗ ಆಘಾತಕ್ಕೊಳಗಾಗಿದ್ದ ಈ ಮಹಿಳೆ, ಆತನ ಜೊತೆ ಮದುವೆ ಮಾಡಿಸಿದ ತನ್ನ ಅತ್ತಿಗೆಯ ಬಳಿ ಅಳಲು ತೋಡಿಕೊಂಡರೂ ಏನೂ ಪ್ರಯೋಜನವಾಗಿಲ್ಲವಂತೆ. ಹೇಗೋ ಕಷ್ಟಪಟ್ಟು ಜೀವನ ಸಾಗಿಸೋಣ ಅಂದ್ರೆ, ಪಾಪಿ ಗಂಡ ಹೆಂಡತಿಯನ್ನೂ ವೇಶ್ಯಾವಾಟಿಕೆಗೆ ದೂಡಲು ಒತ್ತಡ ಹಾಕುತ್ತಿದ್ದು, ಇದರಿಂದ ಬೇಸತ್ತ ಪತ್ನಿ ಮನೆಯಿಂದ ಹೊರಬಂದು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾಳೆ. ಆದರೆ ಪೊಲೀಸರು ಮಹಿಳೆಯಿಂದ ದೂರು ಪಡೆಯಲು ನಿರಾಕರಿಸಿದ್ದಾರೆ. ನಂತರ ಮಾಧ್ಯಮದ ಮುಂದೆ ಬಂದು ರಕ್ಷಣೆ ಕೋರಿದ್ದಾಳೆ. ರಕ್ಷಣೆ ಕೋರಿದ ವಿಷಯ ತಿಳಿದ ಪೋಲಿಸರು ಆರೋಪಿಯನ್ನ ಬಂಧಿಸಿದ್ದಾರೆ.

ಇನ್ನು ನೊಂದ ಮಹಿಳೆಯ ಪತಿ ವೇಶ್ಯಾವಾಟಿಕೆ ದಂಧೆಯಲ್ಲಿ ಹಲವಾರು ಮಹಿಳೆಯರು ಹಾಗೂ ಗ್ರಾಹಕರ ಜೊತೆ ಮೊಬೈಲ್ ಸಂಭಾಷಣೆ ನಡೆಸಿರುವ ವಾಯ್ಸ್ ಕ್ಲಿಪ್ಪಿಂಗ್‌ಗಳನ್ನು ಸುವರ್ಣ ನ್ಯೂಸ್‌ಗೆ ನೀಡಿದ್ದಾಳೆ.

ಒಟ್ಟಾರೆ ಏನೂ ಅರಿಯದ ವಯಸ್ಸಿನಲ್ಲಿ ವೇಶ್ಯಾವಾಟಿಕೆ ನಡೆಸುವ ಪಿಂಪ್ ಒಬ್ಬನನ್ನ ಮದುವೆಯಾದ ಅಮಾಯಕ ಮಹಿಳೆ, ತಾನು ಗಂಡನ ಯಾವುದೇ ಒತ್ತಡಕ್ಕೆ ಮಣಿಯದೆ, ಗೌರವಯುತ ಜೀವನ ನಡೆಸಬೇಕು ಎಂಬ ಆಸೆಯಿಂದ ಮನೆಯಿಂದ ಹೊರ ಬಂದಿದ್ದಾಳೆ. ಅಮಾಯಕಳ ಅಸಹಾಯಕತೆ ಕಂಡು ಮಾನವೀಯತೆ ತೋರಿರುವ ಆಕೆಯ ದೂರದ ಸಂಬಂಧಿ ಈಕೆಗೆ ಆಶ್ರಯ ನೀಡಿದ್ದು, ವೇಶ್ಯಾವಾಟಿಕೆ ಜಾಲದವರ ಬೆದರಿಕೆ ಕರೆಗಳಿಂದ ಆತನೂ ಆತಂಕದಲ್ಲಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇನ್ನಾದರೂ ಪೋಲೀಸರು ವೇಶ್ಯಾವಾಟಿಕೆ ಜಾಲವನ್ನು ಬಯಲಿಗೆಳೆಯುವ ಮೂಲಕ, ನೊಂದ ಹೆಣ್ಣು ಮಕ್ಕಳಿಗೆ ಗೌರವಯುತ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡಬೇಕಿದೆ.