ತವರು ಮನೆಯಲ್ಲೇ ಇರುವೆ ಎಂದ ಪತ್ನಿಯ ಮೂಗು, ತುಟಿ ಕೊಯ್ದು ಪತಿ ಮಹಾಶಯನೊಬ್ಬ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ನಡೆದಿದೆ. 

ಮೋಳೆ : ಮನೆಗೆ ಬರಲು ಒಪ್ಪದೇ, ತವರು ಮನೆಯಲ್ಲೇ ಇರುವೆ ಎಂದ ಪತ್ನಿಯ ಮೂಗು, ತುಟಿ ಕೊಯ್ದು ಪತಿ ಮಹಾಶಯನೊಬ್ಬ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಗವಾಡದ ಸುನೀತಾ ನಾಯಿಕ (28) ಹಲ್ಲೆಗೊಳಗಾದವರು. ಮಹಾರಾಷ್ಟ್ರದ ಶಿರೋಳ ತಾಲೂಕಿನ ಶೇಡಶ್ಯಾಳ ಗ್ರಾಮದ ಸುರೇಶ ನಾಯಿಕ ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪಿ. ಸುನೀತಾ ಅವರ ವಿವಾಹ 2 ವರ್ಷಗಳ ಹಿಂದೆ ಮಹಾರಾಷ್ಟ್ರದ ಸುರೇಶ್‌ ಜತೆ ನೆರವೇರಿತ್ತು.

ಮದುವೆ ಆದಾಗಿನಿಂದ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇದರಿಂದ ನೊಂದು ಕಾಗವಾಡದಲ್ಲಿರುವ ತವರುಮನೆಗೆ ವಾಪಸ್‌ ಬಂದಿದ್ದಳು. ಆಕೆಯನ್ನು ಕರೆದುಕೊಂಡು ಹೋಗಲು ಸುರೇಶ್‌ ಭಾನುವಾರ (ಜ.6) ಆಗಮಿಸಿದ್ದು, ಈ ವೇಳೆ ಇಬ್ಬರ ನಡುವೆ ಮತ್ತೆ ಜಗಳವಾಗಿದೆ. ಹಿರಿಯರ ಸಂಧಾನಕ್ಕೂ ಬಗ್ಗದ ಸುನೀತಾ, ಪತಿಯ ಮನೆಗೆ ಹೋಗಲು ನಿರಾಕರಿಸಿದ್ದಾಳೆ. 

ಇದರಿಂದ ಬೇಸರಗೊಂಡ ಆಕೆಯ ಪತಿ ಸುರೇಶ, ಭಾನುವಾರ ರಾತ್ರಿ ಪತ್ನಿ ಮಲಗಿದ್ದಾಗ ಆಕೆಯ ಮೂಗು, ತುಟಿಯನ್ನು ಚಾಕುವಿನಿಂದ ಕತ್ತರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.