ಸಾಕು ಮಾಡಪ್ಪಾ ನಿನ್ನ ಓವರ್ ಆ್ಯಕ್ಟಿಂಗ್! ರಿಪೋರ್ಟರ್ ನಾಟಕ ಕ್ಯಾಮರಾದಲ್ಲಿ ಸೆರೆ! ಅಮೆರಿಕದಲ್ಲಿ ಭಾರೀ ಚಂಡಮಾರುತ! ಹಾರಿ ಹೋಗುತ್ತೇನೆ ಎನ್ನುವಷ್ಟರ ಮಟ್ಟಿಗೆ ನಾಟಕ ಮಾಡಿದ ವರದಿಗಾರ ವರದಿಗಾರನ ಬೆನ್ನ ಹಿಂದೆ ಜನರ ಮಾಮೂಲಿ ಓಡಾಟ! ರಿಪೋರ್ಟರ್ ನಾಟಕಕ್ಕೆ ಟ್ರೋಲಿಗರ ತಪರಾಕಿ   

ನಾರ್ಥ್ ಕೊರೊಲಿನಾ(ಸೆ.16): ಕೆಲವೊಮ್ಮೆ ವರದಿಗಾರರು ಮಾಡುವ ಯಡವಟ್ಟುಗಳಿಗೆ ಸುದ್ದಿವಾಹಿನಿಗಳು ಮುಜುಗರಕ್ಕೊಳಗಾಗುವುದು ಸರ್ವೆ ಸಾಮಾನ್ಯ. ಅದರಲ್ಲೂ ಸುದ್ದಿ ನೀಡುವ ಭರದಲ್ಲಿ ಕೆಲವು ವರದಿಗಾರರು ಅತ್ಯುತ್ಸಾಹ ತೋರಿ ನಗೆಪಾಟಲಿಗೆ ಈಡಾಗುತ್ತಾರೆ.

ಇಂತದ್ದೇ ಯಡವಟ್ಟೊಂದನ್ನು ಅಮೆರಿಕದ ಟಿವಿ ವರದಿಗಾರನೊಬ್ಬ ಮಾಡಿದ್ದಾನೆ. ಅಮೆರಿಕದ ಉತ್ತರ ಕೊರೊಲಿನಾದಲ್ಲಿ ಭಾರೀ ಚಂಡಮಾರುತ ಅಪ್ಪಳಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ ಮೈಕ್ ಸಿಡಲ್ ಎಂಬ ವರದಿಗಾರ ಚಂಡಮಾರುತದ ಪ್ರಭಾವ ಕಡಿಮೆ ಇರುವ ಸ್ಥಳದಲ್ಲಿ ನಿಂತು ವರದಿ ಮಾಡುತ್ತಾ, ತಾನಿದ್ದ ಸ್ಥಳದಲ್ಲಿ ಭಾರೀ ಚಂಡಮಾರುತ ಬೀಸುತ್ತಿದೆ ಎಂದು ತೋರಿಸುವ ಸಲುವಾಗಿ ಸುಮ್ಮನೆ ನಿಂತಲ್ಲಿ ನಿಲ್ಲದೇ ನಾಟಕ ಮಾಡಿದ್ದಾನೆ.

Scroll to load tweet…

ಮೈಕ್ ಕ್ಯಾಮರಾ ಮುಂದೆ ತಾನಿದ್ದ ಸ್ಥಳದಲ್ಲಿ ಭಯಂಕರ ಗಾಳಿ ಬೀಸುತ್ತಿದೆ ಎಂದು ತೋರಿಸಲು ಸುಮ್ಮನೇ ಅಲುಗಾಡುತ್ತಾ ವರದಿ ಮಾಡಿದ್ದಾನೆ. ಆದರೆ ಮೈಕ್ ಹಿಂದೆ ಇಬ್ಬರು ವ್ಯಕ್ತಿಗಳು ಆರಾಮವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇನ್ನು ಮೈಕ್ ನಾಟಕವನ್ನು ಸಾಮಾಜಿಕ ಜಾಲತಾಣಗಳಲ್ಲಿ 10 ಮಿಲಿಯನ್ ಗೂ ಹೆಚ್ಚು ಜನ ವೀಕ್ಷಿಸಿದ್ದು, ಜನಪ್ರಿಯತೆಗಾಗಿ ಇಂತಹ ನಾಟಕ ಬೇಡ ಎಂದು ಹರಿಹಾಯ್ದಿದ್ದಾರೆ. ಅಲ್ಲದೇ ತನ್ನ ವರದಿಗಾರನ ಸುಳ್ಳು ಸುದ್ದಿಗಾಗಿ ಚಾನೆಲ್ ಕೂಡ ಜನತೆಯ ಕ್ಷಮೆಯಾಚಿಸಿದೆ.