ಮಡಿಕೇರಿ :  ಕೊಡಗಿನಲ್ಲಿ ತಿಂಗಳ ಹಿಂದೆ ಸುರಿದ ಮಹಾಮಳೆಯಿಂದ ಹಾನಿಗೀಡಾಗಿರುವ ಪ್ರದೇಶದಲ್ಲಿ ಅಧ್ಯಯನ ನಡೆಸಿದ್ದ ಭಾರತೀಯ ಭೂ ಸರ್ವೇಕ್ಷಣಾ ವಿಜ್ಞಾನಿಗಳ(ಜಿಎಸ್‌ಐ) ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪವೇ ಈ ಅವಘಡಗಳಿಗೆ ಕಾರಣ ಎಂದು ಸ್ಪಷ್ಟಪಡಿಸಿದೆ. 

ಮಾನವ ಹಸ್ತಕ್ಷೇಪ, ಬೆಟ್ಟಗುಡ್ಡಗಳನ್ನು ಅವೈಜ್ಞಾನಿಕವಾಗಿ ವಿರೂಪ ಮಾಡಿ ಮನೆ, ರೆಸಾರ್ಟ್‌ ನಿರ್ಮಾಣ, ಅವೈಜ್ಞಾನಿಕವಾಗಿ ಗುಡ್ಡ ಪ್ರದೇಶಗಳನ್ನು ಸಮತಟ್ಟು ಮಾಡಿರುವುದು, ತೋಟಕ್ಕಾಗಿ ಬೆಟ್ಟದ ಮೇಲೆ ಕೆರೆ ನಿರ್ಮಾಣ ಇತ್ಯಾದಿಗಳಿಂದಾಗಿಯೇ ಪ್ರಾಕೃತಿಕ ವಿಕೋಪ ಸಂಭವಿಸಿದೆ ಎಂದು ತಿಳಿಸಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪ್ರಾಥಮಿಕ ವರದಿ ಸಲ್ಲಿಸಿರುವ ಜಿಎಸ್‌ಐ ಜಿಲ್ಲೆಯಲ್ಲಿ ಜುಲೈನಲ್ಲಿ ಸಂಭವಿಸಿದ ಭೂಕಂಪನಕ್ಕೂ ಆಗಸ್ಟ್‌ ಭೂಕುಸಿತಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ವರದಿ ತಿಳಿಸಿದೆ. ದುರಂತದ ಹಿಂದಿನ ಕಾರಣ ಕಂಡು ಹಿಡಿಯುವಂತೆ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಗೆ ಕೊಡಗು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸತತ ಒಂದು ತಿಂಗಳ ಕಾಲ ಅಧ್ಯಯನ ನಡೆಸಿದ ವಿಜ್ಞಾನಿಗಳ ತಂಡ ಅಧ್ಯಯನದ ಪ್ರಾಥಮಿಕ ವರದಿಯನ್ನು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಜಿಎಸ್‌ಐ ವಿಜ್ಞಾನಿಗಳ ತಂಡ ಜಿಲ್ಲೆಯಲ್ಲಿ ಇನ್ನೂ ಕೆಲಕಾಲ ಅಧ್ಯಯನ ಮುಂದುವರಿಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪವೇ ದುರಂತಕ್ಕೆ ಕಾರಣ ಹಾಗೂ ಜಿಲ್ಲೆಯಲ್ಲಿ ಬೆಟ್ಟದ ಮೇಲೆ ಕಟ್ಟಡಗಳನ್ನು ಕಟ್ಟಿರುವುದರಿಂದ ಪ್ರಕೃತಿಯ ಮೇಲೆ ಪರಿಣಾಮ ಬೀರಿದೆ ಎಂದು ವಿಜ್ಞಾನಿಗಳು ನೀಡಿರುವ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

- ಪಿ.ಐ.ಶ್ರೀವಿದ್ಯಾ, ಕೊಡಗು ಜಿಲ್ಲಾಧಿಕಾರಿ