ಉತ್ತರ ಕನ್ನಡ (ಜೂ. 04): ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಶಿರಸಿಯಿಂದ 11 ಕಿ.ಮೀ ದೂರದ ಭೈರುಂಬೆಯಲ್ಲಿ ೯೯ ವರ್ಷಗಳ ಹಿಂದೆ ರೈತರೇ ಹುಟ್ಟುಹಾಕಿರುವ ‘ಹುಳಗೋಳ ಸಹಕಾರ ಸಂಘ’ ಇದೆ. ಭೈರುಂಬೆ ಸುತ್ತಲಿನ 2 ಪಂಚಾಯತ್ ವ್ಯಾಪ್ತಿಯ ಅಗಸಾಲ ಬೊಮ್ಮನಳ್ಳಿ, ತಾರಗೋಡ, ಬೆಳಲೆ, ನಡಗೋಡ, ಗೋಳಿಕೊಪ್ಪ ಮುಂತಾದ 10 ಗ್ರಾಮಗಳ ಸಮಗ್ರ ವಿಕಾಸಕ್ಕೆ ಈ ಸಂಘ ಕಾರಣೀಭೂತವಾಗಿರು ಸಂಘ ಇದೇ ತಿಂಗಳ ೯ಕ್ಕೆ ಶತಮಾನೋತ್ಸವ ಸಂಭ್ರಮದಲ್ಲಿ ತೊಡಗಿದೆ.

ಇಲ್ಲಿ ಏನೆಲ್ಲಾ ಸೌಲಭ್ಯಗಳಿವೆ ? 
ರೈತರ ಕೃಷಿ-ತೋಟಗಾರಿಕಾ ಉತ್ಪನ್ನಗಳಿಗೆ ಮಾರಾಟ ವ್ಯವಸ್ಥೆಗೆ  ಸಂಪರ್ಕ, ಕೃಷಿಗೆ ಬೇಕಾದ ಎಲ್ಲ ಸಲಕರಣೆ, ಗೊಬ್ಬರ, ಕಿರಾಣಿ ಸೌಲಭ್ಯ, ಸಹಕಾರಿ ಡೈರಿ, ಪಶು ಆಹಾರ, ಎಲ್ಲ ರೀತಿಯ ಕೃಷಿ ಸಾಲ, ಸಾಂಬಾರು ಬೆಳೆಗಳ ಸಂಸ್ಕರಣೆ, ಸಾಂಬಾರು ಗಿಡಗಳು ಇದೆಲ್ಲಾ ಸೇರಿದಂತೆ ರೈತರಿಗೆ ಅನುಕೂಲವಾಗುವಂತಹ ಎಲ್ಲಾ ಸೌಲಭ್ಯಗಳೂ ಇಲ್ಲಿವೆ. ಇದರ ಜೊತೆಗೆ ಕಳೆದೆ 25 ವರ್ಷಗಳಿಂದ ಇಲ್ಲಿ ಕ್ಯಾಶ್‌ಲೆಸ್ ವ್ಯವಹಾರ ನಡೆಯುತ್ತಿರುವುದು ದೊಡ್ಡ ಹೆಮ್ಮೆ.

ರೈತನ ನೆರವಿಗೆ ಸದಾ ಸಿದ್ಧ
ಸಂಘದ ಪದಾಧಿಕಾರಿಗಳು ಕೃಷಿ ತಜ್ಞರ ತಂಡದೊಂದಿಗೆ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಬೆಳೆ ಪ್ರತಿ ಹಂತದಲ್ಲೂ ಸಲಹೆ ಸೂಚನೆ ನೀಡುತ್ತಾರೆ. ಇದರಿಂದ ಮಧ್ಯಮ ವರ್ಗದ ರೈತರು ಆರ್ಥಿಕವಾಗಿ ಶಕ್ತರಾಗಿದ್ದಾರೆ. ದೈನಂದಿನ ಬದುಕಿಗೆ ಬೇಕಾದ ಬಟ್ಟೆ ಅಂಗಡಿ, ವಿಮಾ ಸೇವೆ, ಫೋನ್ ಬಿಲ್, ವಿದ್ಯುತ್‌ಬಿಲ್, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಧುಶ್ರೀ ಕ್ಯಾಶ್ ಸರ್ಟಿಫಿಕೇಟ್, ಸಂಕಷ್ಟ ಪರಿಹಾರ ನಿಧಿ, ವೈಜ್ಞಾನಿಕವಾದ ಜಲಸಂವರ್ಧನಾ ಯೋಜನೆ, ಬೆಟ್ಟ ಅಭಿವೃದ್ಧಿ ಯೋಜನೆ... ಹೀಗೆ ರೈತನಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿರುವ ಸಂಘದ ಆಡಳಿತ ಮಂಡಳಿಯನ್ನು ಮುನ್ನಡೆಸುತ್ತಿರುವುದು ಗಜಾನನ ಎಂ. ಹೆಗಡೆ. ಹದಿನಾರು ಪ್ರಶಸ್ತಿ, ಐದು ಶಾಖೆ ಸಹಕಾರಿ ಕ್ಷೇತ್ರದ ೧೬ ಪ್ರಶಸ್ತಿಗಳನ್ನು ಪಡೆದಿರುವ ಈ ಸಂಘ ಈವರೆಗೆ ೫ ಶಾಖೆಗಳನ್ನು ಹೊಂದಿದೆ.

ತನ್ಮೂಲಕ 10 ಗ್ರಾಮಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಿಕಾಸಕ್ಕೆ ಕಾರಣವಾಗಿದೆ. ಇಲ್ಲಿ ರೈತರು ಫೋನ್ ಮಾಡಿದರೆ ಸಾಕು ಸೊಸೈಟಿ ವಾಹನ ಜಮೀನಿಗೇ ಬಂದು ಉತ್ಪನ್ನವನ್ನು ತಾಲೂಕು ಕೃಷಿ ಮಾರುಕಟ್ಟೆಯ ಮಾರಾಟ ಸಹಕಾರ ಸಂಘಕ್ಕೆ ಒಯ್ಯುತ್ತದೆ. ನ್ಯಾಯಯುತ ಬೆಲೆ ಕೊಡಿಸಿ ಬಂದ ಲಾಭದಲ್ಲಿ ಉಳಿತಾಯ ಮಾಡುವಂತೆಯೂ ಇಲ್ಲಿ ಪ್ರೇರೇಪಿಸುತ್ತಾ ಬರಲಾಗಿದೆ. ೫ ಸಾವಿರ ಸಂಖ್ಯೆಯ ರೈತ ಮಹಿಳೆ, ಕೃಷಿ ಕಾರ್ಮಿಕ ಸದಸ್ಯರನ್ನೊಳಗೊಂಡ ಸಂಘ ಯಾವುದೇ ಸದಸ್ಯರ ಮನೆಯಲ್ಲಿ ಸಾವು ನೋವು ಸಂಭವಿಸಿದರೆ ತಕ್ಷಣವೇ 10, 000 ರುಪಾಯಿಯನ್ನು ನೀಡಿ ಬೆಂಬಲಕ್ಕೆ ನಿಲ್ಲುತ್ತಾ ಬಂದಿದೆ.

20 ಕೋಟಿ ಮೀರಿದ ರೈತರ ಆದಾಯ ಸುಮಾರು 34  ಕೋಟಿ ರು. ಡಿಪಾಸಿಟ್ ಹೊಂದಿರುವ ಇಲ್ಲಿ, ಪ್ರತಿ ಹಂತದಲ್ಲೂ ಸಾಲ ಸುಲಭವಾಗಿ ಸಿಕ್ಕುತ್ತದೆ. ಅದೇ ರೀತಿ ಇದುವರೆಗೂ ಶೇ. 99 ರಷ್ಟು ಸಾಲ ಮರುಪಾವತಿಯಾಗಿದೆ. 10 ಹಳ್ಳಿಗಳ ರೈತರ ಆದಾಯ 20 ಕೋಟಿ ರುಪಾಯಿ ಮೀರಿದೆ. ಆರ್ಥಿಕ ಸ್ವಾವಲಂಬನೆ, ಕೃಷಿ ತರಬೇತಿ, ಮಕ್ಕಳಿಗೆ ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆ ಎಲ್ಲಕ್ಕೂ  ಇಲ್ಲಿ ವ್ಯವಸ್ಥೆ ಮಾಡಲಾಗಿದೆ.

ವರ್ಷಪೂರ್ತಿ ಶತಮಾನೋತ್ಸವ  ಇದೀಗ 100 ನೇ ವರ್ಷಕ್ಕೆ ಹುಳಗೋಳ ಸೊಸೈಟಿ ಪಾದಾರ್ಪಣೆ ಮಾಡುತ್ತಿದೆ. ಜುಲೈ 9 ರಂದು ಭೈರುಂಬೆಯಲ್ಲಿ ಸಮಾರಂಭ ಏರ್ಪಾಡಾಗಿದ್ದು, ವರ್ಷ ಪೂರ್ತಿ ರೈತರ ವಿಕಾಸಕ್ಕೆ ಪೂರಕವಾದ  ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಮಹಿಳೆಯ ಆರ್ಥಿಕ ಚಟುವಟಿಕೆ, ಹಿತ್ತಲು ಅಭಿವೃದ್ಧಿ, ಮಲೆನಾಡಿನ ಸಹಕಾರ ಸಂಘಗಳ ಜೊತೆ ಅನುಭವ ವಿನಿಮಯ, ನೂತನ ಸಭಾಭವನ ಉದ್ಘಾಟನೆ, ಹಾಲು ಉತ್ಪಾದಕರ ಸಮಾವೇಶ, ಬೆಟ್ಟ ಅಭಿವೃದ್ಧಿ, ಜಲಸಂರಕ್ಷಣೆ ಗೋಷ್ಠಿಗಳು, ಆರೋಗ್ಯ ಶಿಬಿರಗಳು, ಮಣ್ಣಿನ ಪರೀಕ್ಷೆ ಶಿಬಿರ, ಸಹಕಾರಿ ಸಂಘದ ಭವಿಷ್ಯ ಚಿಂತನೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ.

ಗಾಂಧೀಜಿಯ ವಿಕೇಂದ್ರೀಕರಣ, ಗ್ರಾಮ ಸ್ವರಾಜ್ಯ, ಸ್ವಾವಲಂಬನೆ ಸೇರಿದಂತೆ ಸುಸ್ಥಿರ ಕೃಷಿ, ಸೋಲಾರ್, ಗೋಬರ್ ಗ್ಯಾಸ್, ಕಿರು ನೀರಾವರಿ, ನರ್ಸರಿ, ಹಳ್ಳಿಯಲ್ಲೇ ಸಹಕಾರಿ ಸಾಲ, ಉಳಿತಾಯ, ವಸತಿ ಶಾಲೆ ಇವೆಲ್ಲವನ್ನೂ ನೀವಿಲ್ಲಿ  ಕಾಣಬಹುದು.