ಮಡಿಕೇರಿ (ಸೆ.16): ಕಾವೇರಿ ಕಣಿವೆಯ ರೈತರ ನ್ಯಾಯಯುತ ಹಕ್ಕಿಗಾಗಿ 8 ಜಿಲ್ಲೆಗಳು ಸೇರಿ ಕಾವೇರಿ ಕಣಿವೆ ರೈತ ಒಕ್ಕೂಟ ರಚನೆಯಾಗಿದ್ದು, ಸೆ.19ರಂದು ಮಂಡ್ಯದಲ್ಲಿ ಬೃಹತ್‌ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿರುವುದಾಗಿ ಕನ್ನಡ ಸೇನೆ ಮುಖಂಡ ಮಂಜುನಾಥ್‌ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಸಂಸದರು ಹಾಗೂ ಶಾಸಕರು ಧ್ವನಿ ಎತ್ತುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ರಾಮನಗರ, ತುಮಕೂರು, ಬೆಂಗಳೂರು ಮತ್ತು ಕೊಡಗು ರೈತರನ್ನೊಳಗೊಂಡ ಕಾವೇರಿ ಕಣಿವೆ ರೈತ ಒಕ್ಕೂಟವನ್ನು ರಚಿಸಲಾಗಿದೆ ಎಂದರು.

ಕಾವೇರಿ ಕಣಿವೆ ರೈತ ಒಕ್ಕೂಟದಲ್ಲಿ 8 ಜಿಲ್ಲೆಗಳ ರೈತ, ಪ್ರಗತಿಪರ ಮತ್ತು ಕನ್ನಡಪರ ಸಂಘಟನೆಗಳು ಸಕ್ರಿಯವಾಗಿವೆ. ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರಕ್ಕೆ ಒಕ್ಕೂಟ ಹಂತಹಂತವಾಗಿ ಹೋರಾಟ ರೂಪಿಸಲಿದೆ ಎಂದರು.

ರೈತರು ಹಾಗೂ ಜನಪ್ರತಿನಿಧಿಗಳ ಸಮಾವೇಶದಲ್ಲಿ ಜಿಲ್ಲೆಯ ರೈತರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಬೇಕು. ಜನಪ್ರತಿನಿಧಿಗಳು ಬಾರದಿದ್ದರೆ ನಮ್ಮ ಮುಂದಿನ ನಡೆಯ ಬಗ್ಗೆ ಸಮಾವೇಶದಲ್ಲಿ ಘೋಷಿಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.