- ಶಿವಾನಂದ ಗೊಂಬಿ 

ಹುಬ್ಬಳ್ಳಿ (ಸೆ. 24): ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ಜನರಿಗೆ ತಿಳಿವಳಿಕೆ ಹೇಳಿ ಸ್ವಚ್ಛತಾ ಅಭಿಯಾನದ ಯಶಸ್ಸಿಗೆ ತನ್ನದೇ ಆದ ಕೊಡುಗೆ ನೀಡಿದ ಹುಬ್ಬಳ್ಳಿಯ ಗುತ್ತಿಗೆ ಪೌರಕಾರ್ಮಿಕನಿಗೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದಾವಕಾಶ ಸಿಕ್ಕಿದೆ.

‘ಬಯಲು ಬಹಿರ್ದೆಸೆæಗೆ ಹೋಗಬ್ಯಾಡ್ರಿ.. ರೋಗ ರುಜಿನ್‌ ಬರ್ತಾವ್‌.. ಎಲ್ರೂ ನಿಮ್ಮ ನಿಮ್ಮ ಮನ್ಯಾಗ ಪಾಯಖಾನಿ ಕಟ್ಟಿಸಿಕೊಳ್ಳರ್ರಿ..’ ಎಂದು ಊರೆಲ್ಲ ಜಾಗೃತಿ ಮೂಡಿಸುವ ಮೂಲಕ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ಜನರನ್ನು ಪ್ರೇರೇಪಿಸಿದ ಗುತ್ತಿಗೆ ಪೌರಕಾರ್ಮಿಕ ಕರಿಬಸಪ್ಪ ಬಸಪ್ಪ ಗುಡಿಸಲಮನಿ ಅವರು ಗುಜರಾತ್‌ನ ಸಾಬರ್‌ಮತಿಯಲ್ಲಿ ಗಾಂಧಿ ಜಯಂತಿ(ಅ.2) ದಿನ ನಡೆಯಲಿರುವ ‘ಸ್ವಚ್ಛತಾ ದಿವಸ್‌’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ದರ್ಗಾ, ಮಂದಿರದ ತೆರವಿಗೆ ಕೂಡಿ ಬಂದ ಕಾಲ?

ಕೇಂದ್ರದ ಗ್ರಾಮೀಣ ನೀರು ಸರಬರಾಜು, ನೈರ್ಮಲ್ಯ ಇಲಾಖೆ ಸೆ.30ರಿಂದ ಅ.2ರ ವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಎಲ್ಲರಿಗೂ 2 ದಿನ ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಾಣ, ಸ್ವಚ್ಛತೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಕೊನೇ ದಿನವಾದ ಅ.2ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿ ದೇಶದ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ಧಾರವಾಡ ಜಿಲ್ಲೆಯಿಂದ ಇಬ್ಬರು ಆಯ್ಕೆಯಾಗಿದ್ದು, ಇವರ ಪೈಕಿ ಹೆಬ್ಬಳ್ಳಿ ಗ್ರಾಪಂನ ಗುತ್ತಿಗೆ ಪೌರ ಕಾರ್ಮಿಕ ಕರಿಬಸಪ್ಪ ಒಬ್ಬರು. ಕೇವಲ 6ನೇ ತರಗತಿ ಕಲಿತಿರುವ ಇವರು 2014ರಿಂದ ಗುತ್ತಿಗೆ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದಾರೆ. ಕಸ ವಿಲೇವಾರಿಯ ಟ್ರ್ಯಾಕ್ಟರ್‌ ಓಡಿಸುತ್ತಾ ಸ್ವಚ್ಛ ಭಾರತ ಆಂದೋಲನದ ಜೊತೆ ಕೈಜೋಡಿಸಿದ್ದಾರೆ.

ಗ್ರಾಪಂ ಅಧ್ಯಕ್ಷನಿಗೂ ಆಹ್ವಾನ:

ಇನ್ನು ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಪಂ ಅಧ್ಯಕ್ಷ ಬಸವರಾಜ ಬಿಡ್ನಾಳ ಸಹ ಈ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದಾರೆ. ಇವರು ಪ್ಲ್ಯಾಸ್ಟಿಕ್‌ ಮುಕ್ತ ಗ್ರಾಮಕ್ಕಾಗಿ ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಅಂಚಟಗೇರಿ ಗ್ರಾಮದಲ್ಲಿನ ಶಾಲಾ ಮಕ್ಕಳನ್ನೇ ರಾಯಭಾರಿಗಳನ್ನಾಗಿ ಮಾಡಿಕೊಂಡಿದ್ದಾರೆ.

ವಿಶ್ವಸಂಸ್ಥೆಗೆ ಬಂದು ಮತ್ತೆ ಮೋದಿ ಭಾಷಣ ಕೇಳಿದ ಟ್ರಂಪ್!

ಇವರಿಗೇಕೆ ಆಯ್ಕೆ?:

ಹುಬ್ಬಳ್ಳಿಯಲ್ಲಿ 2767 ಕುಟುಂಬಗಳಿವೆ. 5 ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಸಿರಿವಂತರ ಮನೆಯಲ್ಲಿ ಮಾತ್ರ ಶೌಚಾಲಯಗಳಿದ್ದವು. ಉಳಿದಂತೆ ಎಲ್ಲರೂ ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿದ್ದರು. ಅದಾಗಷ್ಟೇ ಕೆಲಸಕ್ಕೆ ಸೇರಿದ್ದ ಗುಡಿಸಲಮನಿ ಹೇಗಾದರೂ ಮಾಡಿ ತಮ್ಮೂರನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕು, ಇದಕ್ಕಾಗಿ ಎಲ್ಲರ ಮನೆಗಳಲ್ಲೂ ಶೌಚಾಲಯ ನಿರ್ಮಾಣ ಆಗಬೇಕು ಎಂಬ ಪಣ ತೊಟ್ಟರು. ಗ್ರಾಪಂ ಸದಸ್ಯರು, ಪಿಡಿಒಗಳ ಬಳಿ ಶೌಚಾಲಯ ಕಟ್ಟಿಸಿಕೊಳ್ಳಲು ಸರ್ಕಾರದಿಂದ ಸಿಗುವ ಧನ ಸಹಾಯದ ಬಗ್ಗೆ ಅರಿತರು. ಗ್ರಾಪಂ ಆಡಳಿತ ಮಂಡಳಿ ಬಳಿ ತಾನೂ ಶೌಚಾಲಯ ಕುರಿತು ಜಾಗೃತಿ ಮೂಡಿಸುತ್ತೇನೆ ಎಂದು ಅನುಮತಿ ಪಡೆದರು.

ಅಲ್ಲಿಂದ ಶುರುವಾದ ಇವರ ಜಾಗೃತಿ ಯಾತ್ರೆ ಈವರೆಗೂ ನಿಂತಿಲ್ಲ. ಬೆಳಗಿನ ಜಾವವೇ ಎದ್ದು ಯಾರಾರ‍ಯರು ಬಹಿರ್ದೆಸೆಗೆ ಹೋಗುತ್ತಿದ್ದರೂ ಅವರನ್ನು ತಡೆಯುವುದು ‘ನಿಮ್ಮ ಮನ್ಯಾಗ ಪಾಯಖಾನಿ ಕಟ್ಟಿಸಿಕೊಳ್ಳರ್ರಿ.. ಪಾಯಖಾನಿ ಕಟ್ಟಿಸಿಕೊಳ್ಳಾಕ ಸರ್ಕಾರದವ್ರ ರೊಕ್ಕ ಕೊಡ್ತಾರ. ನೀವೇನು ಹೆಚ್ಗಿ ಖರ್ಚು ಮಾಡ್ಬೇಕಾಗಿಲ್ಲ...’ ಎಂದು ತಿಳಿ ಹೇಳುತ್ತಿದ್ದರು. ಜತೆಗೆ ಸಂಜೆ ವೇಳೆ ಊರ ಬೀದಿಗಳಲ್ಲಿ ಬೀದಿ ನಾಟಕ ಸೇರಿ ಮತ್ತಿತರರ ಕಾರ್ಯಕ್ರಮಗಳನ್ನು ನಡೆಸಿ ಶೌಚಾಲಯದ ಅನುಕೂಲಗಳೇನು ಎಂಬ ಬಗ್ಗೆ ಅರಿವು ಮೂಡಿಸುತ್ತಿದ್ದರು.

ಇದೆಲ್ಲದರ ಪರಿಣಾಮ ಗ್ರಾಮದಲ್ಲಿ ನಿಧಾನವಾಗಿ ಶೌಚಾಲಯ ಜಾಗೃತಿ ಆರಂಭವಾಗಿದ್ದು, ಸದ್ಯ ಊರಲ್ಲಿ 2767 ಕುಟುಂಬಗಳ ಪೈಕಿ 2226 ಮನೆಗಳಲ್ಲಿ ಶೌಚಾಲಯಗಳಿವೆ. ಬಾಕಿಯುಳಿದಿರುವ 541 ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ.

ಹುಬ್ಬಳ್ಳಿಯಲ್ಲಿ ಪೊಲೀಸ್‌ ಇಲಾಖೆಯಿಂದ ಸ್ಪೆಷಲ್ ಡ್ರೈವ್‌

ಗ್ರಾಪಂ ಅಧ್ಯಕ್ಷನಿಗೂ ಆಹ್ವಾನ: ಇನ್ನು ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಪಂ ಅಧ್ಯಕ್ಷ ಬಸವರಾಜ ಬಿಡ್ನಾಳ ಸಹ ಈ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದಾರೆ. ಇವರು ಪ್ಲ್ಯಾಸ್ಟಿಕ್‌ ಮುಕ್ತ ಗ್ರಾಮಕ್ಕಾಗಿ ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಅಂಚಟಗೇರಿ ಗ್ರಾಮದಲ್ಲಿನ ಶಾಲಾ ಮಕ್ಕಳನ್ನೇ ರಾಯಭಾರಿಗಳನ್ನಾಗಿ ಮಾಡಿಕೊಂಡಿದ್ದಾರೆ.

ಮಕ್ಕಳು ತಮ್ಮ ತಮ್ಮ ಮನೆಗಳಿಂದ ಪ್ಲ್ಯಾಸ್ಟಿಕ್‌ ಕ್ಯಾರಿಬ್ಯಾಗ್‌, ಬಾಟಲಿಗಳನ್ನು ತಂದರೆ ಅವರಿಗೆ ತಮಗೆ ಸರ್ಕಾರದಿಂದ ಬರುವ ಗೌರವ ಧನದಿಂದ .2ರಂತೆ ಪ್ರೋತ್ಸಾಹಧನ ನೀಡುತ್ತಿದ್ದಾರೆ. ಇದರಿಂದಾಗಿ ಸಣ್ಣದಾಗಿ ಪ್ಲ್ಯಾಸ್ಟಿಕ್‌ ಮುಕ್ತ ಗ್ರಾಮದತ್ತ ಅಂಚಟಗೇರಿ ಹೆಜ್ಜೆ ಇಟ್ಟಂತಾಗಿದೆ. ಇವರ ಕಾರ್ಯ ವೈಖರಿಯಿಂದ ಇವರನ್ನು ಮೋದಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಇದೇ ರೀತಿ, ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್‌ ಪುತ್ರನ್‌ ಹಾಗೂ ಕಾರ್ಕಳ ಮುಡಾರುವಿನ ಸ್ವಚ್ಛಾಗ್ರಹಿ ಮಾಧವಿ ಕೆ. ನಾಯಕ್‌ ಕೂಡ ಗುಜರಾತ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶಪಡೆದಿದ್ದಾರೆ.

ಐದು ವರ್ಷದ ಹಿಂದೆಯಷ್ಟೇ ಪೌರಕಾರ್ಮಿಕನಾಗಿ ಕೆಲಸಕ್ಕೆ ಸೇರಿದ್ದೆ. ಆದರೆ ನಾ ಮಾಡಿದ ಜಾಗೃತಿಯಿಂದ ಸಾಕಷ್ಟುಜನ ಶೌಚಾಲಯ ಕಟ್ಟಿಸಿಕೊಂಡರು. ಅದರಿಂದ ಇದೀಗ ಪ್ರಧಾನಿಗಳ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿದೆ. ಬಹಳ ಸಂತೋಷವಾಗಿದೆ.

- ಕರಿಬಸಪ್ಪ ಬಸಪ್ಪ ಗುಡಿಸಲಮನಿ, ಪೌರಕಾರ್ಮಿಕ