ಮುಂಬೈ: ದೇಶದ ಆರ್ಥಿಕತೆಯ ಬಗ್ಗೆ ನಾನಾ ರೀತಿಯ ಟೀಕೆ ಹಾಗೂ ವ್ಯಾಖ್ಯಾನಗಳು ಕೇಳಿಬರುತ್ತಿರುವುದರ ಮಧ್ಯೆಯೇ ಭಾರತೀಯ ಆರ್‌ಬಿಐ ತನ್ನ ವಿದೇಶಿ ವಿನಿಮಯ ಮೀಸಲಿಗೆ 3.1 ಟನ್ ಚಿನ್ನವನ್ನು ಹೊಸತಾಗಿ ಸೇರಿಸಿದೆ. ಅದರೊಂದಿಗೆ ಭಾರತದ ವಿದೇಶಿ
ಮೀಸಲಿನ ಚಿನ್ನದ ಒಟ್ಟು ಪ್ರಮಾಣವೀಗ 560.3 ಟನ್‌ಗೆ ಏರಿಕೆಯಾಗಿದೆ. 

ಇಷ್ಟು ಚಿನ್ನದ ಅಂದಾಜು ಮೊತ್ತ ಸುಮಾರು 1.68 ಲಕ್ಷ ಕೋಟಿ ರು.  2009ರಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ 200 ಟನ್ ಚಿನ್ನ ಖರೀದಿಸಿ ಭಾರತ ತನ್ನ ವಿದೇಶಿ ಮೀಸಲಿಗೆ ಸೇರಿಸಿತ್ತು. ಅದರ ನಂತರ ಇದೇ ಮೊದಲ ಬಾರಿಗೆ 2018ರ ಮಾರ್ಚ್‌ಗೆ ಕೊನೆಯಾದ 2017-18ನೇ ಸಾಲಿನ 4ನೇ ತ್ರೈಮಾಸಿಕದ ವೇಳೆ 3.1 ಟನ್ ಚಿನ್ನ ಖರೀದಿಸಿ ವಿದೇಶಿ ಮೀಸಲು ನಿಧಿಯನ್ನು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ಜಗತ್ತಿನ ಎಲ್ಲಾ ದೇಶಗಳು ಜಾಗತಿಕ ಮೀಸಲು ಕರೆನ್ಸಿಯಾದ ಅಮೆರಿಕನ್ ಡಾಲರ್ ಹಾಗೂ ಚಿನ್ನದ ರೂಪದಲ್ಲಿ ಬೃಹತ್ ಮೊತ್ತದ ಸಂಪತ್ತನ್ನು ವಿದೇಶಿ ವಿನಿಮಯ ಮೀಸಲಾಗಿ ಸಂಗ್ರಹಿಸಿಟ್ಟಿರುತ್ತವೆ. ಈ ಮೀಸಲು ಎಷ್ಟಿದೆ ಎಂಬುದರ ಮೇಲೆ ಆಯಾ ದೇಶ
ಗಳು ನಿರ್ದಿಷ್ಟ ಪ್ರಮಾಣದ ಕರೆನ್ಸಿ ನೋಟು ಪ್ರಿಂಟ್ ಮಾಡಿ ತಮ್ಮ ದೇಶದಲ್ಲಿ ಬಿಡುಗಡೆ ಮಾಡಬಹುದು.

ಭಾರತೀಯ ರಿಸರ್ವ್ ಬ್ಯಾಂಕ್ ಮಹಾರಾಷ್ಟ್ರದ ನಾ ಗ್ಪುರ ಮತ್ತು ಲಂಡನ್‌ನಲ್ಲಿ ವಿದೇಶಿ ಮೀಸಲು ಕೋಶ ಹೊಂದಿದ್ದು, ಅಲ್ಲಿ ಚಿನ್ನ ಹಾಗೂ ಡಾಲರ್‌ಗಳನ್ನು ಸಂಗ್ರಹಿಸಿಡುತ್ತದೆ. ಇದೀಗ 3.1 ಟನ್ ತೂಕದ ಚಿನ್ನವನ್ನು ಲಂಡನ್ ಮೂಲದ 2 ಬ್ಯಾಂಕ್‌ಗಳಿಂದ ಖರೀದಿಸಲಾಗಿದೆ ಎಂದು ತಿಳಿದುಬಂದಿದೆ.