ಭಾರತ-ಇಸ್ರೇಲ್ ರಹಸ್ಯ ರಕ್ಷಣಾ ಒಪ್ಪಂದದ ಕಡತ ನಾಪತ್ತೆ| ತಾವು ಉಳಿದುಕೊಂಡಿದ್ದ ಹೊಟೇಲ್ ಕೋಣೆಯಲ್ಲೇ ಕಡತ ಬಿಟ್ಟು ಹೋಗಿದ್ದ ಇಸ್ರೇಲಿ ಅಧಿಕಾರಿಗಳು| ಹೊಟೇಲ್ ಮಾಣಿಯ ಕೈಗೆ ಸಿಕ್ಕ ರಹಸ್ಯ ಒಪ್ಪಂದದ ಕಡತಗಳು| ರಹಸ್ಯ ಕಡತಗಳನ್ನು ಸುರಕ್ಷಿತವಾಗಿ ಇಸ್ರೇಲ್ ರಾಯಭಾರ ಕಚೇರಿ ತಲುಪಿಸಿದ ಹೊಟೇಲ್ ಮಾಣಿ|
ಜೆರುಸಲೇಂ(ಏ.03): ಭಾರತ-ಇಸ್ರೇಲ್ ನಡುವೆ ಕಳೆದ ಜನೆವರಿಯಲ್ಲಿ ನಡೆದಿದ್ದ ರಕ್ಷಣಾ ಒಪ್ಪಂದದ ರಹಸ್ಯ ಕಡತಗಳನ್ನು ಇಸ್ರೇಲಿ ಅಧಿಕಾರಿಗಳು ಕಳೆದುಕೊಂಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಸ್ರೇಲ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೇರ್ ಬೆನ್, ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಮಿತಿಯೊಂದಿಗೆ ಕಳೆದ ಜನೆವರಿಯಲ್ಲಿ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಬೆನ್ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಈ ವೇಳೆ ಉಭಯ ರಾಷ್ಟ್ರಗಳ ನಡುವೆ ಹಲವು ಮಹತ್ವದ ಒಪ್ಪಂದ ಏರ್ಪಟ್ಟಿದ್ದು, ಪ್ರಮುಖವಾಗಿ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅಲ್ಲದೇ ಒಪ್ಪಂದದಲ್ಲಿ ಕೆಲವು ಅಂಶಗಳನ್ನು ರಹಸ್ಯವಾಗಿ ಇರಿಸಲಾಗಿತ್ತು.
ಆದರೆ ಇಸ್ರೇಲಿ ಅಧಿಕಾರಿಗಳು ಮರಳಿ ಸ್ವದೇಶಕ್ಕೆ ಹೋಗುವಾಗ ಈ ಕಡತಗಳನ್ನು ತಾವು ಉಳಿದುಕೊಂಡಿದ್ದ ಹೊಟೇಲ್ ನಲ್ಲೇ ಬಿಟ್ಟು ತೆರಳಿದ್ದರು. ಭಾರತ-ಇಸ್ರೇಲ್ ರಕ್ಷಣಾ ಒಪ್ಪಂದದ ಕಡತ ಟೈಪ್ ಮಾಡಿದ್ದ ಇಸ್ರೇಲ್ ನ ಓರ್ವ ಅಧಿಕಾರಿ, ತನ್ನ ಹೊಟೇಲ್ ಕೋಣೆಯಲ್ಲೇ ಈ ಕಡತವನ್ನು ಬಿಟ್ಟು ತೆರಳಿದ್ದರು.
ಆದರೆ ಅದೃಷ್ಟವಶಾತ್ ಅದೇ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಮಾಣಿಯೋರ್ವ ಈ ಕಡತಗಳನ್ನು ಪತ್ತೆ ಹಚ್ಚಿದ್ದಾನೆ. ಅಲ್ಲದೇ ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ತನ್ನ ಗಳೆಯನ ತಾಯಿಯನ್ನು ಸಂಪರ್ಕಿಸಿ ಈ ರಹಸ್ಯ ಕಡತಗಳನ್ನು ಇಸ್ರೇಲ್ ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ.
ಒಂದು ವೇಳೆ ಈ ರಹಸ್ಯ ಕಡತಗಳು ಬಹಿರಂಗಗೊಂಡಿದ್ದರೆ ಭಾರತ-ಇಸ್ರೇಲ್ ರಹಸ್ಯ ರಕ್ಷಣಾ ಒಪ್ಪಂದದ ಕುರಿತು ಶತ್ರುರಾಷ್ಟ್ರಗಳ ಗಮನಕ್ಕೆ ಬಂದಿರುತ್ತಿತ್ತು. ಅದಾಗ್ಯೂ ಇಸ್ರೇಲ್ ಈ ಕುರಿತು ತನಿಖೆಗೆ ಆದೇಶಿಸಿದ್ದು, ಕಡತಗಳನ್ನು ಜೋಪಾನವಾಗಿ ಇಸ್ರೇಲ್ ರಾಯಭಾರ ಕಚೇರಿಗೆ ಒಪ್ಪಿಸಿದ ಹೊಟೇಲ್ ಮಾಣಿಗೆ ಧನ್ಯವಾದ ಅರ್ಪಿಸಿದೆ.
