ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಉಡ್ಡಯನವಾಗುವ ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್‌ನಲ್ಲಿ ಮಾನವಸಹಿತ ಗಗನನೌಕೆ ಇರುತ್ತದೆ. ರಾಕೆಟ್‌ ಅಂತರಿಕ್ಷಕ್ಕೆ ಹೋಗುವುದರೊಳಗೆ ಅದರ ತುದಿಯಲ್ಲಿರುವ ಮಾನವಸಹಿತ ಗಗನೌಕೆಯು ಕಳಚಿಕೊಂಡು ಅಂತರಿಕ್ಷಕ್ಕೆ ಜಿಗಿಯುತ್ತದೆ. ಖಾಲಿ ರಾಕೆಟ್‌ ಸಮುದ್ರಕ್ಕೆ ಬೀಳುತ್ತದೆ. (ಅದನ್ನು ಇಸ್ರೋ ಮರುಬಳಕೆ ಮಾಡುತ್ತಿಲ್ಲ. ಅಮೆರಿಕದ ನಾಸಾ ಇಂತಹ ರಾಕೆಟ್‌ಗಳನ್ನು ಮರುಬಳಕೆ ಮಾಡುತ್ತದೆ). ಅಂತರಿಕ್ಷಕ್ಕೆ ಜಿಗಿದ ಮಾನವಸಹಿತ ಗಗನ ನೌಕೆಯಲ್ಲಿ ಮೂವರು ಬಾಹ್ಯಾಕಾಶ ವಿಜ್ಞಾನಿಗಳಿರುತ್ತಾರೆ.

ಈ ನೌಕೆ 16 ನಿಮಿಷಗಳಲ್ಲಿ ತನಗೆ ನಿಗದಿಪಡಿಸಿದ ಕಕ್ಷೆಯನ್ನು ಸೇರಿಕೊಳ್ಳಲಿದೆ. ಅಲ್ಲಿ ಇದು ಭೂಮಿಯ ಸುತ್ತ ಸುತ್ತುತ್ತಿರುತ್ತದೆ. ಅದರೊಳಗೆ ಬಾಹ್ಯಾಕಾಶ ಯಾನಿಗಳು 5ರಿಂದ 7 ದಿನಗಳ ಕಾಲ ಭೂಮಿಯಿಂದ 300ರಿಂದ 400 ಕಿ.ಮೀ. ಎತ್ತರದಲ್ಲಿ ವಾಸಿಸುತ್ತಾರೆ. ಬಳಿಕ ಗಗನ ಯಾತ್ರಿಗಳು ಭೂಮಿಗೆ ಹಿಂದಿರುಗುವ ದಿನ ಬಂದಾಗ ಅವರು ಕುಳಿತ ಕ್ಯಾಪ್ಸೂಲ್‌ ಮುಖ್ಯ ಸೇವಾ ಘಟಕದಿಂದ ಭೂಮಿಗೆ 120 ಕಿ.ಮೀ. ಇರುವಾಗಲೇ ಬೇರ್ಪಡುತ್ತದೆ. ನಂತರ ಈ ಕ್ಯಾಪ್ಸೂಲ್‌ ಭೂಮಿಯತ್ತ ಧಾವಿಸುತ್ತದೆ. ಆಗ ಪ್ಯಾರಾಚೂಟ್‌ ಕಟ್ಟಿಕೊಂಡು ಗಗನಯಾತ್ರಿಗಳು ಹೊರಕ್ಕೆ ಜಿಗಿದು ಭೂಮಿಗೆ ಮರಳುತ್ತಾರೆ. ಖಾಲಿ ಕ್ಯಾಪ್ಸೂಲ್‌ ಗುಜರಾತ್‌ನ ಅರಬ್ಬಿ ಸಮುದ್ರದಲ್ಲಿ ಬೀಳಲಿದೆ. ಮೊದಲಿಗೆ ಕೇವಲ 16 ನಿಮಿಷಕ್ಕೆ ನಭಕ್ಕೇರುವ ಮಾನವಸಹಿತ ನೌಕೆ, ವಾಪಸ್‌ ಬರುವಾಗ ಕೆಲ ಸುರಕ್ಷತಾ ಕ್ರಮಕ್ಕನುಗುಣವಾಗಿ ಲ್ಯಾಂಡ್‌ ಆಗಲು 36 ನಿಮಿಷ ತೆಗೆದುಕೊಳ್ಳಲಿದೆ.

ಜಗತ್ತಿನಲ್ಲೇ ಅತ್ಯಂತ ಸೋವಿ ಮಾನವಸಹಿತ ಗಗನಯಾನ!: ಜಿಎಸ್‌ಎಸಲ್‌ವಿ ಎಂಕೆ-3 ನೆರವಿನಿಂದ ಕೈಗೊಳ್ಳಲಾಗುವ ಈ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯಾನಕ್ಕೆ ಭಾರತ ಸುಮಾರು 10,000 ಕೋಟಿ ರು. ಹಣ ವೆಚ್ಚ ಮಾಡುತ್ತಿದೆ. ಈ ಹಣವು ಮಾನವಸಹಿತ ಯಾನಕ್ಕೆ ಇತರ ರಾಷ್ಟ್ರಗಳು ವಿನಿಯೋಗಿಸಿದ ಹಣಕ್ಕಿಂತ ತುಂಬಾ ಕಡಿಮೆ. ಚೀನಾ 2003ರಲ್ಲಿ ಮಾನವಸಹಿತ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು 14,960 ಕೋಟಿ ರು. ವೆಚ್ಚ ಮಾಡಿತ್ತು ಎಂಬ ವರದಿ ಇದೆ. ಈ ಹಿಂದೆ ಇಸ್ರೋ ನಡೆಸಿದ ಮಂಗಳಯಾನ ಕೂಡ ಜಗತ್ತಿನಲ್ಲೇ ಅತ್ಯಂತ ಕಡಿಮೆ ಖರ್ಚಿನದಾಗಿತ್ತು.

ಎಷ್ಟುವರ್ಷದಿಂದ ಸಿದ್ಧತೆ ನಡೆಯುತ್ತಿದೆ ಗೊತ್ತಾ? ಬಾಹಾಕಾಶಕ್ಕೆ ಮಾನವನನ್ನು ಕಳುಹಿಸಬೇಕೆಂಬುದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ತರ ಕನಸು. ಇದಕ್ಕಾಗಿ ಸೂಕ್ಷ್ಮ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕೆಲಸಗಳು 2004ರಿಂದಲೇ ಆರಂಭಗೊಂಡಿದ್ದವು. ಆದರೆ ಅದು ಆದ್ಯತೆಯ ನೆಲೆಯಲ್ಲಿರಲಿಲ್ಲ. ಜಿಎಸ್‌ಎಲ್‌ವಿ ಮಾರ್ಕ್-3 ಕಳೆದ ವರ್ಷದವರೆಗೂ ಸಿದ್ಧಗೊಳ್ಳುತ್ತಿತ್ತು. ಅನಂತರದಲ್ಲಿ ಮಾನವಸಹಿತ ಗಗನಯಾನಕ್ಕೆ ಅಗತ್ಯವಿರುವ ಸೂಕ್ಷ್ಮ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 2014ರಲ್ಲಿ ಮಾನವ ಯಾತ್ರಿಗಳು ಅಪಾಯದ ಸಂದರ್ಭದಲ್ಲಿ ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ ಎಂಬ ವ್ಯವಸ್ಥೆಯ ಪ್ರಯೋಗಗಳನ್ನೂ ಇಸ್ರೋ ನಡೆಸಿದೆ. ಉಳಿದೆಲ್ಲಾ ತಂತ್ರಜ್ಞಾನಗಳು ಬಹುತೇಕ ಸಿದ್ಧಗೊಂಡಿವೆ. ಅಂತಿಮ ಹಂತದ ಸಿದ್ಧತೆಗಳಿಗೇ ಇನ್ನು ಮೂರು ವರ್ಷಗಳ ಕಾಲ ಬೇಕಾಗುತ್ತದೆ.

3 ಗಗನಯಾನಿಗಳ ಆಯ್ಕೆ, ತರಬೇತಿ ಹೇಗೆ? ಚೊಚ್ಚಲ ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಗಗನಯಾತ್ರಿಗಳ ಆಯ್ಕೆಗೆ ಸಂಬಂಧಿಸಿದಂತೆ ವಾಯುಪಡೆಯ ಜೊತೆ ಇಸ್ರೋ ಅನೌಪಚಾರಿಕ ಮಾತುಕತೆ ನಡೆಸುತ್ತಿದೆ. ಗಗನಯಾತ್ರಿಗಳಿಗೆ ತರಬೇತಿ ನೀಡುವುದಕ್ಕೆ ಸಂಬಂಧಪಟ್ಟಂತೆ ಭಾರತೀಯ ವಾಯುಪಡೆಗೆ ಅನುಭವವಿದೆ. ಹಾಗಾಗಿ ವಾಯುಪಡೆ ಯಾರನ್ನು ಆಯ್ಕೆ ಮಾಡುತ್ತದೋ ಅವರನ್ನೇ ಗಗನಯಾನಕ್ಕೆ ಕಳುಹಿಸಲಾಗುತ್ತದೆ. ಆದರೆ, ಇವರು ಬಾಹ್ಯಾಕಾಶ ವಿಜ್ಞಾನಿಗಳೇ ಆಗಿರುತ್ತಾರೆ. ಈ ಆಯ್ಕೆ ಪ್ರಕ್ರಿಯೆ ಬಹುವಿಧದ್ದಾಗಿದ್ದು, ದೈಹಿಕ, ಮಾನಸಿಕ ಮತ್ತು ಲೋಹಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ಅವರ ಮೇಲೆ ನಡೆಸಲಾಗುತ್ತದೆ. ಮಾನವ ಸಹಿತ ನೌಕೆಯನ್ನು ಕಳುಹಿಸುವುದಕ್ಕೂ ಮುಂಚಿತವಾಗಿ ಎರಡು ಮಾನವರಹಿತ ನೌಕೆಗಳನ್ನು ಉಡಾವಣೆ ಮಾಡಲಾಗುತ್ತದೆ.

2022 ರಲ್ಲಿ ಇಸ್ರೋದಿಂದ ಮಾನವ ಸಹಿತ ಗಗನಯಾನ

ಮೊದಲ ಯಾನ 2020ರ ಡಿಸೆಂಬರ್‌ನಲ್ಲಿ ಹಾಗೂ ಎರಡನೇ ಯಾನ 2021ರ ಜೂನ್‌ನಲ್ಲಿ ನಡೆಯಲಿದೆ. ಬಳಿಕ 2022ರ ಡಿಸೆಂಬರ್‌ ಒಳಗೆ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಭಾರತೀಯ ವಾಯುಪಡೆ ಗಗನಯಾತ್ರಿಗಳ ಹೆಸರನ್ನು ಅಂತಿಮಗೊಳಿಸಿದ ಬಳಿಕ ಅಭ್ಯರ್ಥಿಗಳಿಗೆ ಎರಡರಿಂದ ಮೂರು ವರ್ಷಗಳ ಕಾಲ ಅತ್ಯಂತ ಕಠಿಣ ತರಬೇತಿ ನೀಡಲಾಗುತ್ತದೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ಹೇಗೆ ಬದುಕಬೇಕು ಮುಂತಾದ ವಿಷಯಗಳಲ್ಲಿ ಅವರನ್ನು ಸಿದ್ಧಪಡಿಸಲಾಗುತ್ತದೆ. ಇದನ್ನು ಅಂತಾರಾಷ್ಟ್ರೀಯ ಸಹಭಾಗಿತ್ವದಲ್ಲಿ ನಡೆಸಲಾಗುತ್ತದೆ.

ಗಗನಯಾತ್ರಿಕರು ಅಂತರಿಕ್ಷದಲ್ಲಿ 1 ವಾರ ಏನು ಮಾಡುತ್ತಾರೆ? ಭೂಮಿಯಿಂದ 300-400 ಕಿ.ಮೀ. ದೂರದಲ್ಲಿ ಮಾನವಸಹಿತ ಬಾಹ್ಯಾಕಾಶ ನೌಕೆ ಭೂಮಿಯ ಸುತ್ತ ಸುತ್ತುತ್ತಿರುತ್ತದೆ. 5ರಿಂದ 7 ದಿನಗಳ ಕಾಲ ಹೀಗೇ ಚಲಿಸುತ್ತಿರುತ್ತದೆ. ಈ ಅವಧಿಯಲ್ಲಿ ಗಗನಯಾತ್ರಿಗಳು ಸೂಕ್ಷ್ಮ ಗುರುತ್ವದ ಪ್ರಯೋಗಗಳನ್ನು ನಡೆಸಲಿದ್ದಾರೆ. ಅದೇ ವೇಳೆ, ಬಾಹ್ಯಾಕಾಶದಲ್ಲಿ ಮಾನವನ ಮೇಲಿನ ಪರಿಣಾಮಗಳ ಕುರಿತು ಅಧ್ಯಯನ ನಡೆಸಲಿದ್ದಾರೆ. ಈ ಅಧ್ಯಯನದಲ್ಲಿ ತಿಳಿಯುವ ಸಂಗತಿಗಳು ಇಸ್ರೋ ಇನ್ನುಮುಂದೆ ನಡೆಸಬಹುದಾದ ಅಂತರಿಕ್ಷ ಯಾನಕ್ಕೆ ನೆರವಾಗಲಿವೆ.

ಪಾಕ್, ಚೀನಾ ಕಡಿವಾಣಕ್ಕೆ ಇಸ್ರೋದಿಂದ ಉಪಗ್ರಹ

ಭಾರತಕ್ಕೇನು ಉಪಯೋಗ?

* ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಭೂತಪೂರ್ವ ಪ್ರಗತಿಯಾಗುತ್ತಿದೆ ಎಂಬುದು ಜಗತ್ತಿಗೆ ತಿಳಿಯಲಿದೆ.

* ಬಾಹ್ಯಾಕಾಶ ವಿಜ್ಞಾನದಲ್ಲಿ ಹೊಸಹೊಸ ಆವಿಷ್ಕಾರಕ್ಕೆ ಅವಕಾಶಗಳು ಸೃಷ್ಟಿಯಾಗುತ್ತವೆ.

* ಶೂನ್ಯ ಗುರುತ್ವದಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಅಧ್ಯಯನಗಳನ್ನು ನಡೆಸುವ ತಂತ್ರಜ್ಞಾನ ಭಾರತಕ್ಕೆ ಸಿದ್ಧಿಸುತ್ತದೆ.

* ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟುಹೊಸ ಸಾಧನೆಗಳನ್ನು ಮಾಡಲು ಯುವ ಪೀಳಿಗೆಗೆ ಸ್ಫೂರ್ತಿಯಾಗುತ್ತದೆ.

ಬಾಹ್ಯಾಕಾಶ ನೌಕೆಯ ಒಳಗೆ ಹೇಗಿರುತ್ತದೆ? ಭೂಮಿಯಿಂದ 300-400 ಕಿ.ಮೀ. ದೂರದಲ್ಲಿ ಸುತ್ತುವ ಮಾನವಸಹಿತ ನೌಕೆಯೊಳಗೆ ಸುರಕ್ಷತಾ ದೃಷ್ಟಿಯಿಂದ ಪರಿಸರ ನಿಯಂತ್ರಿತ ಮತ್ತು ಜೀವನ ಆಧಾರಿತ ವ್ಯವಸ್ಥೆಯನ್ನು ಕಲ್ಪಿಸಿ ಮನುಷ್ಯ ಜೀವಿಸಲು ಅವಶ್ಯಕವಾದ ಹವಾಮಾನವನ್ನು ಸೃಷ್ಟಿಸಲಾಗುತ್ತದೆ. ಅದಕ್ಕಾಗಿ ನೌಕೆಯ ಒಳಗೆ ಟ್ವಿನ್‌ ವಾಲ್‌ ಸೀಲ್ಡ್‌ ವ್ಯವಸ್ಥೆ ಇದ್ದು, ಇದು ಭೂಮಿಯ ವಾತಾವರಣವನ್ನೇ ಹೋಲುವ ವಾತಾವರಣವನ್ನು ಕಲ್ಪಿಸುತ್ತದೆ. ಇದರಲ್ಲಿ ಇಬ್ಬರು ಅಥವಾ ಮೂವರು ಗಗನಯಾತ್ರಿಗಳು ಪ್ರಯಾಣಿಸಬಹುದು. ಪರಿಸರ ನಿಯಂತ್ರಿತ ಮತ್ತು ಜೀವನ ಆಧಾರಿತ ವ್ಯವಸ್ಥೆಯು ಹಾನಿಕಾರಕ ಗ್ಯಾಸ್‌ ಹಾಗೂ ಕಾರ್ಬನ್‌ ಡೈಆಕ್ಸೈಡನ್ನು ಹೊರದಬ್ಬುತ್ತದೆ. ಹಾಗೂ ಉಷ್ಣಾಂಶವನ್ನು ಸಮಸ್ಥಿತಿಯಲ್ಲಿಡುತ್ತದೆ. ಜೊತೆಗೆ ಆಹಾರ ಮತ್ತು ನೀರು ನಿರ್ವಹಣೆ, ತುರ್ತು ಸಹಕಾರದ ವ್ಯವಸ್ಥೆ ಇರುತ್ತದೆ. ಈ ಕ್ಯಾಪ್ಸೂಲ್‌ನ ಲೇಔಟ್‌ ಮತ್ತು ವಿನ್ಯಾಸ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಭಾರತದಂತೆ ಜಪಾನ್‌ ಕೂಡ 2022ರ ಒಳಗಾಗಿ ಮಾನವ ಸಹಿತ ನೌಕೆಯನ್ನು ನಭಕ್ಕೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ.

ಅಂತರಿಕ್ಷಕ್ಕೆ ಮನುಷ್ಯನ ಕಳುಹಿಸಿದ ದೇಶಗಳ ಪಟ್ಟಿ

*ಯುಎಸ್‌ಎಸ್‌ಆರ್‌ (ರಷ್ಯಾ)

* ಅಮೆರಿಕ

* ಚೀನಾ