ಬೆಂಗಳೂರು (ಆ. 29): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮಹತ್ವಾಕಾಂಕ್ಷಿ ಮಾನವಸಹಿತ ವ್ಯೋಮಯಾನದ ವಿವರಗಳನ್ನು ಇದೇ ಮೊದಲ ಬಾರಿ ಬಿಚ್ಚಿಟ್ಟಿದೆ.

2022 ರಲ್ಲಿ ಕೈಗೂಡಲಿರುವ ದೇಶದ ಮೊತ್ತಮೊದಲ ಮಾನವ ಸಹಿತದ ಬಾಹ್ಯಾಕಾಶಯಾನಕ್ಕೆ ಮೂವರು ಭಾರತೀಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಯಾನಿಗಳು 5-7 ದಿನಗಳ ಕಾಲ ಬಾಹ್ಯಾಕಾಶದಲ್ಲೇ ಇರಲಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು ಹೇಳಿದ್ದಾರೆ.

ಈ ಮೂಲಕ ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಿದ ಅಮೆರಿಕ, ರಷ್ಯಾ ಮತ್ತು ಚೀನಾ ನಂತರದ ೪ನೇ ಸ್ಥಾನವನ್ನು ಭಾರತ ತನ್ನ ಮುಡಿಗೇರಿಸಿಕೊಳ್ಳಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ
ಕೇಂದ್ರದಿಂದ ಉಡ್ಡಯನವಾದ 16 ನಿಮಿಷಗಳಲ್ಲಿ ಮಾನವ ಸಹಿತದ ಯಾನವು ಕಕ್ಷೆಯನ್ನು ಸೇರಿಕೊಳ್ಳಲಿದೆ. ಬಳಿಕ 5-7 ದಿನಗಳ ಬಳಿಕ ಗುಜರಾತ್‌ನ ಅರಬ್ಬಿ ಸಮುದ್ರ ಅಥವಾ ಬಂಗಾಳಕೊಲ್ಲಿ ಅಥವಾ ನೆಲದ ಮೇಲೆ ಮಾನವ ಸಹಿತದ ಯಾನವು ಲ್ಯಾಂಡ್ ಆಗಲಿದೆ.

ಆಗಸದಿಂದ ಭೂಮಿಗೆ ಕೇವಲ 36 ನಿಮಿಷದಲ್ಲಿ ನೌಕೆ ವಾಪಸ್ಸಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಶಿವನ್ ಅವರು ಮಂಗಳವಾರ ಮಾಹಿತಿ ನೀಡಿದರು. ಈ ಬಗ್ಗೆ ದೆಹಲಿಯಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

‘ದೇಶ 75 ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧವಾಗುವ 6 ತಿಂಗಳ ಮುನ್ನ ಜಿಎಸ್‌ಎಲ್‌ವಿ ಎಂಕೆ-3 ನೆರವಿನಿಂದ ಮಾನವ ಸಹಿತದ ಯಾನ ಕೈಗೊಳ್ಳಲಾಗುತ್ತದೆ. ಇದಕ್ಕೆ 10 ಸಾವಿರ ಕೋಟಿ ರು.ಗಿಂತ ಕಡಿಮೆ ಹಣ ವ್ಯಯವಾಗಲಿದೆ,’ ಎಂದು ಹೇಳಿದರು

ಈ ಹಣವು ಮಾನವ ಸಹಿತ ಯಾನಕ್ಕೆ ಇತರ ರಾಷ್ಟ್ರಗಳು ವಿನಿಯೋಗಿಸಿದ ಹಣಕ್ಕಿಂತ ತುಂಬಾ ಕಡಿಮೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಧ್ವನಿ ಸೇರಿಸಿದರು.

‘ಈ ಯಾನಕ್ಕಾಗಿ ಬೆಂಗಳೂರಿನಲ್ಲಿ ವ್ಯೋಮ ಯಾನಿಗಳಿಗೆ ತರಬೇತಿ ನೀಡಲಾಗುತ್ತದೆ. 2-3 ವರ್ಷಗಳ ಕಾಲ ಸಿಬ್ಬಂದಿಗೆ ನಿರ್ದಿಷ್ಟ ತರಬೇತಿ ನೀಡಿದ ಬಳಿಕ, ಭಾರತೀಯ ಸೇನೆ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಜಂಟಿಯಾಗಿ ಆಯ್ಕೆ ಮಾಡುತ್ತವೆ. ಅಲ್ಲದೆ, ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಅವರಿಂದಲೂ ಯಾನಕ್ಕೆ ಅಗತ್ಯವಿರುವ ಮಾಹಿತಿ ಸಂಗ್ರಹಿಸಲಾಗುತ್ತದೆ’ ಎಂದು ಶಿವನ್ ಅವರು ಹೇಳಿದರು.

2004 ರಿಂದಲೇ ಸಿದ್ಧತೆ:

ಈ ನಡುವೆ ಶಿವನ್ ಪ್ರತಿಕ್ರಿಯಿಸಿ, ‘ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಸೂಕ್ಷ್ಮ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಯೋಜನೆ 2004 ರಲ್ಲೇ ಆರಂಭಗೊಂಡಿತ್ತು. ಆದರೆ, ಅದು ಆದ್ಯತೆಯ ನೆಲೆಯಲ್ಲಿರಲಿಲ್ಲ. ಈಗ ಈ ಸಂಬಂಧ ರಾಜಕೀಯ ನಿಧಾರವನ್ನು ಮೋದಿ ಸರ್ಕಾರ ಕೈಗೊಂಡಿದ್ದು, ಇದನ್ನು ಇಸ್ರೋ ನನಸು ಮಾಡಲಿದೆ’ ಎಂದರು.

2022 ರಲ್ಲಿ ಬಾಹ್ಯಾಕಾಶಕ್ಕೆ ಭಾರತೀಯನನ್ನು ಕಳುಹಿಸಲಾಗುತ್ತದೆ ಎಂದು ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿದ್ದರು.

2019 ರ ಜನವರಿಯಲ್ಲಿ ಚಂದ್ರಯಾನ:

2019 ರ ಜನವರಿಯಲ್ಲಿ ಚಂದ್ರಯಾನ-2 ಯೋಜನೆ ಕೈಗೆತ್ತಿಕೊಳ್ಳಲಾಗುವುdu ಎಂದು ಶಿವನ್ ಮಾಹಿತಿ ನೀಡಿದರು.