ಗೆಲ್ಲಲೆಂದೇ ಎಲ್ಲರೂ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ. ಆದರೆ ಹೊಟ್ಟೆ ಪಕ್ಷದ ರಂಗಸ್ವಾಮಿ ಅವರು ಇದಕ್ಕೆ ತದ್ವಿರುದ್ಧ. ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಕಾರಣಕ್ಕೆ ಅವರು ಅಖಾಡಕ್ಕೆ ಇಳಿಯುತ್ತಿದ್ದರು. 3 ದಶಕಗಳ ಅವಧಿಯಲ್ಲಿ ಲೋಕಸಭೆ, ವಿಧಾನಸಭೆ ಸೇರಿ 86 ಚುನಾವಣೆಗಳಲ್ಲಿ ಅವರು ಪರಾಭವಗೊಂಡಿದ್ದರು. ಒಮ್ಮೆಯೂ ಗೆದ್ದಿರಲಿಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಕೆಂಗಲ್ ಹನುಮಂತಯ್ಯ, ಎಸ್.ಎಂ. ಕೃಷ್ಣ ವಿರುದ್ಧವೂ ಸ್ಪರ್ಧೆ ಮಾಡಿ ಸೋತಿದ್ದರು. 2007ರಲ್ಲಿ ನಿಧನರಾದರು. ತಾವೇ ಸ್ಥಾಪಿಸಿದ್ದ ‘ಹೊಟ್ಟೆ ಪಕ್ಷ’ದಿಂದ ಕಣಕ್ಕಿಳಿಯುತ್ತಿದ್ದರು. ಅತಿ ಹೆಚ್ಚು ಬಾರಿ ಸೋಲು ಅನುಭವಿಸಿದ ಕಾರಣಕ್ಕೆ ಗಿನ್ನೆಸ್ ದಾಖಲೆ ಪುಸ್ತಕದಲ್ಲೂ ರಂಗಸ್ವಾಮಿ ಹೆಸರು ಸೇರ್ಪಡೆಯಾಗಿತ್ತು.