Asianet Suvarna News Asianet Suvarna News

ಕರ್ನಾಟಕದ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆ ವಿರುದ್ಧ ಹೋರಾಟ: ಹೊಸಬಾಳೆ

ಕರ್ನಾಟಕದಲ್ಲಿ ಜೆಹಾದಿ ಟೆರರಿಸ್ಟ್‌ಗಳು ಸಂಘ ಪರಿವಾರದ ಕಾರ್ಯಕರ್ತರನ್ನು ಹತ್ಯೆಗೈಯುತ್ತಿದ್ದು ಈ ಬಗ್ಗೆಯೂ ಸಂಘ ಹೋರಾಟ ನಡೆಸಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಸಹ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

Hosabale Dattatreya Urges to Protest Against RSS Activists Murderer

 ನವದೆಹಲಿ (ಆ.04): ಕರ್ನಾಟಕದಲ್ಲಿ ಜೆಹಾದಿ ಟೆರರಿಸ್ಟ್‌ಗಳು ಸಂಘ ಪರಿವಾರದ ಕಾರ್ಯಕರ್ತರನ್ನು ಹತ್ಯೆಗೈಯುತ್ತಿದ್ದು ಈ ಬಗ್ಗೆಯೂ ಸಂಘ ಹೋರಾಟ ನಡೆಸಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಸಹ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ನವದೆಹಲಿಯ ಪ್ರೆಸ್‌ಕ್ಲಬ್‌ನಲ್ಲಿ ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿರುವುದನ್ನು ಖಂಡಿಸಿ ಕರೆದಿದ್ದ ಪತ್ರಿಕಾಗೋಷ್ಠಿಯ ನೇಪಥ್ಯದಲ್ಲಿ ಹೊಸಬಾಳೆ ‘ಕನ್ನಡ ಪ್ರಭ’ದೊಂದಿಗೆ ಮಾತನಾಡಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹೊಸಬಾಳೆ, 2016 ರ ಅಕ್ಟೋಬರ್‌ನಿಂದ ಈವರಗೆ ಒಟ್ಟು 14 ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗಿದ್ದು ಅಲ್ಲಿನ ಪಿಣರಾಯಿ ವಿಜಯನ್ ನೇತೃತ್ವದ ಕಮ್ಯುನಿಸ್ಟ್ ಸರ್ಕಾರ ಹತ್ಯೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳುತ್ತಿಲ್ಲ ಎಂದು ಆರೋಪಿಸಿದರು. ಕೇರಳದಲ್ಲಿ ನಡೆದ ರಾಜಕೀಯ ಹತ್ಯೆಗಳ ಬಗ್ಗೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದರು.

ಕೇರಳದಲ್ಲಿ ದಲಿತ, ಹಿಂದುಳಿದ ವರ್ಗದ ಯುವಕರು ಆರೆಸ್ಸೆಸ್ ಕಡೆ ಆಕರ್ಷಿತರಾಗುತ್ತಿದ್ದಾರೆ. ಅವರನ್ನು ಗುರಿ ಮಾಡಿ ಕೊಲೆ ಮಾಡಲಾಗುತ್ತಿದೆ. ಈ ಹಿಂದೆ ತುರ್ತು ಪರಿಸ್ಥಿತಿಯ ಬಳಿಕ ಆರೆಸ್ಸೆಸ್ ಸೇರುತ್ತಿದ್ದ ಕಮ್ಯುನಿಸ್ಟ್ ಕಾರ್ಯಕರ್ತರನ್ನು ಇದೇ ರೀತಿ ಕೊಲೆ ಮಾಡಲಾಗುತ್ತಿತ್ತು ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದರು.

ಬಾಳೆ ಎಲೆ, ಹೂ ಇಟ್ಟು ಕೊಲೆ:

ಒಂದೇ ರೀತಿಯಲ್ಲಿ ದಾಳಿ ನಡೆಸಿ ಆರೆಸ್ಸೆಸ್ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ. ಆದ್ದರಿಂದ ಹತ್ಯೆ ಮಾಡಲು ತರಬೇತಿ ಪಡೆದಿದ್ದಾರೆ ಎಂಬ ಶಂಕೆ ಮೂಡುತ್ತದೆ. ಕೇರಳದಲ್ಲಿ ಬಾಳೆ ಎಲೆ ಮೇಲೆ ಶವ ಇಡುವ ಸಂಪ್ರದಾಯವಿದ್ದು ಅದರಂತೆ ತಾವು ಗುರಿ ಮಾಡಿರುವ ವ್ಯಕ್ತಿಯನ್ನು ಕೊಲ್ಲುವ ಮೊದಲು ಆತನ ಮನೆಯ ಮುಂದೆ ಬಾಳೆ ಎಲೆ ಇಟ್ಟು ಅದರ ಮೇಲೆ ಹೂವು ಇಟ್ಟು ಬಳಿಕ ಕೊಲೆ ಮಾಡಲಾಗುತ್ತಿದೆ ಎಂದು ಹೊಸಬಾಳೆ ವಿವರಿಸಿದ್ದಾರೆ. ಆರೆಸ್ಸೆಸ್ ಕಾರ್ಯಕರ್ತರ ಕೊಲೆ ಸರ್ಕಾರಿ ಪ್ರಾಯೋಜಿತ ಎಂದೆನ್ನಿಸುತ್ತಿದೆ. ಸಿಪಿಎಂ ಕಾರ್ಯಕರ್ತರು ಕೇವಲ ಆರೆಸ್ಸೆಸ್‌ನ್ನು ಮಾತ್ರ ಗುರಿ ಮಾಡಿಲ್ಲ. ಈ ಹಿಂದೆ ಕಾಂಗ್ರೆಸ್, ಮುಸ್ಲಿಂ ಲೀಗ್, ಸಿಪಿಐ ಕಾರ್ಯಕರ್ತರು ಅಷ್ಟೇ ಅಲ್ಲ ತಮ್ಮ ನಡೆಯನ್ನು ವಿರೋಧಿಸಿದ್ದ ತಮ್ಮದೇ ಪಕ್ಷದ ನಾಯಕರ ಹತ್ಯೆಯನ್ನೂ ಕೂಡ ನಡೆಸಿದ್ದಾರೆ ಎಂದು ಆರೋಪಿಸಿದರು.

ಕೇರಳದಲ್ಲಿ ಸಿಪಿಎಂ ಕಾರ್ಯಕರ್ತರು ರಕ್ತದಾಹಿಗಳಾಗಿದ್ದಾರೆ. ಅಲ್ಲಿ ಕಮ್ಯುನಿಸ್ಟ್ ತಾಲಿಬಾನಿಸಂ ಇದೆ. ಕಮ್ಯುನಿಸ್ಟ್ ಗ್ರಾಮಗಳೂ ಇದ್ದು ಅದರೊಳಗೆ ಅನ್ಯರಿಗೆ ಪ್ರವೇಶವೇ ಇಲ್ಲದಂತೆ ಮಾಡಲಾಗಿದೆ. ದೇಶದಲ್ಲಿ ಅತಿ ಹೆಚ್ಚು ಜನ ಐಎಸ್‌ಐಎಸ್ ಸೇರಿದ್ದೆ ಕೇರಳದಲ್ಲಿ. ಆದರೆ ಅಲ್ಲಿನ ಸರ್ಕಾರ ಇವುಗಳ ನಿಯಂತ್ರಣಕ್ಕೆ ಯಾವುದೇ ಕಡಿವಾಣ ಹಾಕಿಲ್ಲ ಎಂದು ಆಪಾದಿಸಿದ್ದಾರೆ.

ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರಿಗೆ ತಮ್ಮ ಸಂಘಟನೆಗಾಗಿ ಕೆಲಸ ಮಾಡುವ ಹಕ್ಕಿಲ್ಲವೇ? ಅಲ್ಲಿನ ಸರ್ಕಾರ ಪ್ರಾಯೋಜಿತ ಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲ. ದೇಶದ ಬೇರೆ ಭಾಗದಲ್ಲಿ ನಡೆಯುವ ಕೊಲೆಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಾಗುತ್ತದೆ. ಆದರೆ ಕೇರಳದಲ್ಲಿ ನಮ್ಮ ಕಾರ್ಯಕರ್ತರ ಕೊಲೆಯಾದರೆ ಈ ಬಗ್ಗೆ ಮೌನ ವಹಿಸಲಾಗುತ್ತಿದೆ ಎಂದು ಹೊಸಬಾಳೆ ಹೇಳಿದರು. 

Latest Videos
Follow Us:
Download App:
  • android
  • ios