ನವದೆಹಲಿ[ಫೆ.14]: ಪ್ರಧಾನಿ ನರೇಂದ್ರ ಮೋದಿ ಅವರ ಕಟು ಟೀಕಾಕಾರರಲ್ಲಿ ಒಬ್ಬರಾಗಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್‌ ಯಾದವ್‌ ಅಚ್ಚರಿಯ ವಿದ್ಯಮಾನವೊಂದರಲ್ಲಿ ‘ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಬರಲಿ’ ಎಂದು ಸಂಸತ್ತಿನಲ್ಲಿ ಶುಭ ಹಾರೈಸಿದ್ದಾರೆ. ಅದರೊಂದಿಗೆ, ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಮತ್ತು ಯಾರೂ ಶಾಶ್ವತ ಮಿತ್ರರಲ್ಲ ಎಂಬುದನ್ನು ಪುನಃ ಸಾಬೀತುಪಡಿಸಿದ್ದು, ಈ ಬೆಳವಣಿಗೆಯು ಬಿಜೆಪಿ ವಿರುದ್ಧ ಹೋರಾಡುತ್ತಿರುವ ಮುಲಾಯಂ ಪುತ್ರ ಅಖಿಲೇಶ್‌ ಯಾದವ್‌ ಅವರಿಗೆ ತೀವ್ರ ಮುಜುಗರ ಉಂಟುಮಾಡಿದೆ.

ಮುಲಾಯಂ ಹೇಳಿಕೆ ರಾಜಕೀಯ ಸಂಚಲನ ಉಂಟುಮಾಡುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಮಾಜವಾದಿ ಪಕ್ಷ, ‘ಲೋಕಸಭೆ ಚುನಾವಣೆಗೆ ಹೋಗುವ ಮುನ್ನ ಎಲ್ಲ ಸದಸ್ಯರೂ ಎಲ್ಲರಿಗೂ ಶುಭ ಕೋರುವಂತೆ ಮುಲಾಯಂ ಕೂಡ ಪ್ರಧಾನಿಗೆ ಶುಭ ಕೋರಿದ್ದಾರೆ’ ಎಂದು ಹೇಳಿದೆ. ಮುಲಾಯಂ ಕೂಡ ಸ್ಪಷ್ಟನೆ ನೀಡಲು ಯತ್ನಿಸಿ, ‘ಪ್ರಸ್ತುತ ಲೋಕಸಭಾ ಕಲಾಪದಲ್ಲಿರುವ ಎಲ್ಲ ಸದಸ್ಯರು ಪುನಃ ಆಯ್ಕೆಯಾಗಬೇಕು ಎಂಬುದು ನನ್ನ ಹಾರೈಕೆ ಮಾತ್ರ. ಓರ್ವ ಹಿರಿಯನಾಗಿ ನಾನು ಸಂಪ್ರದಾಯದ ರೀತಿಯಲ್ಲಿ ಎಲ್ಲರಿಗೂ ಆಶೀರ್ವಾದ ಮಾಡಿದೆನಷ್ಟೇ’ ಎಂದು ಹೇಳಿದ್ದಾರೆ.

ಮುಲಾಯಂ ಹೇಳಿಕೆ ಸಂಚಲನ:

ಪ್ರಸಕ್ತ ಲೋಕಸಭೆಯ ಕೊನೆಯ ಅಧಿವೇಶನವಾಗಿರುವ ಬಜೆಟ್‌ ಅಧಿವೇಶನದಲ್ಲಿ ಬುಧವಾರ ಮಾತನಾಡಿದ ಮುಲಾಯಂ, ‘ನಾವು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಬಯಸುತ್ತೇವೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಲು ಯತ್ನಿಸಿದ ಅವರಿಗೆ ಅಭಿನಂದನೆಗಳು. ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಯಾರೂ ಅವರತ್ತ ಬೆರಳು ತೋರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಹೀಗೆ ಹೇಳುವಾಗ ಅವರ ಪಕ್ಕದಲ್ಲೇ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ನಿರ್ಲಿಪ್ತ ಮುಖಭಾವದಲ್ಲಿ ಕುಳಿತಿದ್ದರು. ಪ್ರಧಾನಿ ಮೋದಿ ಅವರು ನಗುತ್ತಾ ಕೈಮುಗಿದು ಕೃತಜ್ಞತೆ ಸಲ್ಲಿಸಿದರು. ಕೆಲವು ಬಿಜೆಪಿ ಸದಸ್ಯರು ಜೈ ಶ್ರೀರಾಂ ಎಂದು ಕೂಗಿದರು.

ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಎದುರಿಸಲೆಂದೇ ಮುಲಾಯಂ ಅವರ ಪುತ್ರ ಅಖಿಲೇಶ್‌ ತಮ್ಮ ಕಡುವಿರೋಧಿ ಬಿಎಸ್‌ಪಿ ನಾಯಕಿ ಮಾಯಾವತಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ, ಕೆಲ ವರ್ಷಗಳಿಂದ ಮಗನ ಜೊತೆಗೆ ಉತ್ತಮ ಸಂಬಂಧ ಹೊಂದಿಲ್ಲದ ಮುಲಾಯಂ ಅವರು ಇದೀಗ ಮೋದಿ ಅವರನ್ನೇ ಹೊಗಳುವ ಮೂಲಕ ಪುತ್ರನನ್ನೂ, ಮೋದಿವಿರೋಧಿ ಪ್ರಾದೇಶಿಕ ಪಕ್ಷಗಳ ಮಹಾಗಠಬಂಧನವನ್ನೂ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ನೇತಾಜಿ (ಮುಲಾಯಂ) ಸಂಸತ್ತಿನ ಸಂಪ್ರದಾಯವನ್ನು ಪಾಲಿಸಿದ್ದಾರೆ. ಚುನಾವಣೆಗೆ ಹೋಗುವ ಮುನ್ನ ಎಲ್ಲ ಸಂಸದರೂ ಎಲ್ಲರಿಗೂ ಶುಭ ಹಾರೈಸುತ್ತಾರೆ. ಅದರಂತೆ ಮೋದಿಯವರೂ ಸೇರಿದಂತೆ ಎಲ್ಲ ಸಂಸದರಿಗೂ ಮತ್ತೊಮ್ಮೆ ಗೆದ್ದು ಬನ್ನಿ ಎಂದು ನೇತಾಜಿ ಶುಭ ಹಾರೈಸಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳಿಗೂ ಒಳ್ಳೆಯದನ್ನು ಬಯಸುವ ನೇತಾಜಿಯವರನ್ನು ನೋಡಿ ಬಿಜೆಪಿಯವರು ಕಲಿಯಬೇಕು.

- ಸುನೀಲ್‌ ಸಿಂಗ್‌ ಸಾಜನ್‌, ಸಮಾಜವಾದಿ ಪಕ್ಷದ ವಕ್ತಾರ

2014ರ ಚುನಾವಣೆಗೂ ಮುನ್ನ ಹಾಗೂ ನಂತರ ಸ್ವತಃ ಮುಲಾಯಂ ಕೂಡ ಮೋದಿಯವರ ಕಟು ಟೀಕಾಕಾರರಾಗಿದ್ದರು. ಮೋದಿ ಒಬ್ಬ ಸುಳ್ಳುಗಾರ, ಅವರಿಗೆ ದೂರದೃಷ್ಟಿಇಲ್ಲ, ಅವರು ನನ್ನ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ, ಅವರು ನಂಬಿಕೆಗೆ ಯೋಗ್ಯರಲ್ಲ ಎಂದೆಲ್ಲ ಈ ಹಿಂದೆ ಮುಲಾಯಂ ಜರಿದಿದ್ದರು.

ಪ್ರಸ್ತುತ ಲೋಕಸಭಾ ಕಲಾಪದಲ್ಲಿರುವ ಎಲ್ಲ ಸದಸ್ಯರು ಪುನಃ ಆಯ್ಕೆಯಾಗಬೇಕು ಎಂಬುದು ನನ್ನ ಹಾರೈಕೆ ಮಾತ್ರ. ಓರ್ವ ಹಿರಿಯನಾಗಿ ನಾನು ಸಂಪ್ರದಾಯದ ರೀತಿಯಲ್ಲಿ ಎಲ್ಲರಿಗೂ ಆಶೀರ್ವಾದ ಮಾಡಿದೆನಷ್ಟೇ.

- ಮುಲಾಯಂ ಸಿಂಗ್‌ ಯಾದವ್‌, ಎಸ್‌ಪಿ ನೇತಾರ