ಬೆಂಗಳೂರು(ಸೆ.20): ಕಾವೇರಿ ಮೇಲುಸ್ತುವಾರಿ ಸಮಿತಿಯ ಸೂಚನೆಯಿಂದ ರಾಜ್ಯಕ್ಕೆ ಹಿನ್ನಡೆಯಾಗಿರುವುದು ಮತ್ತು ಇಂದು ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ನೀರಿನ ಕುರಿತು ಆದೇಶ ಹೊರಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲು ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಈಗಾಗಲೇ ನಗರದ ನಾನಾ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ಕೇಂದ್ರ ಅರೆ ಸೇನಾ ಪಡೆಗಳ ಜತೆಗೇ 16 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಕಾವೇರಿ ಮೇಲುಸ್ತುವಾರಿ ಸಮಿತಿಯು ಮತ್ತೆ ೧೦ ದಿನ ನೀರು ಹರಿಸುವಂತೆ ಸೂಚನೆ ನೀಡಿರುವ ಬೆನ್ನಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೋಮವಾರ ರಾತ್ರಿ ನಗರದಲ್ಲಿ ದಿಢೀರ್ ತಪಾಸಣೆ ನಡೆಸಿದರು. ಹೆಗ್ಗನಹಳ್ಳಿ, ಬ್ಯಾಡರಹಳ್ಳಿ, ಸುಂಕದಕಟ್ಟೆ, ನಂದಿನಿಲೇಔಟ್, ರಾಜಗೋಪಾಲನಗರ ಸೇರಿದಂತೆ ಸೂಕ್ಷ್ಮಪ್ರದೇಶಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.
ನಗರದಲ್ಲಿ ಕೇಂದ್ರದ ಅರೆ ಸೇನಾಪಡೆಯ ೧೪ ತುಕಡಿ, ಸಿಐಎಸ್‌ಎಫ್ ಹಾಗೂ ಐಟಿಬಿಪಿಯ ತಲಾ ಒಂದು ತುಕಡಿ, ಎಸ್‌ಎಸ್‌ಬಿ ಮೂರು ತುಕಡಿ, ಬಿಎಸ್‌ಎಫ್, ಗೃಹ ರಕ್ಷಕ ದಳ, ಡಿಎಆರ್ ಸಿಬ್ಬಂದಿಯಿಂದ ಭದ್ರತೆ ಒದಗಿಸಲಾಗಿದೆ. ಒಟ್ಟಾರೆ ರಾಜ್ಯಾದ್ಯಂತ ೨೫ ಅರೆಸೇನಾ ಪಡೆ ತುಕಡಿ, ಕೆಎಸ್‌ಆರ್‌ಪಿ ೨೦೦ ತುಕಡಿ ಭದ್ರತೆ ನಿಯೋಜನೆಗೊಂಡಿದೆ. ಜತೆಗೆ ಸೂಕ್ಷ್ಮ ಪ್ರದೇಶ, ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶಗಳಿಗೆ ಭಾರಿ ಭದ್ರತೆ ಕಲ್ಪಿಸಲಾಗಿದೆ.
ಈಗಾಗಲೇ ನಗರದಲ್ಲಿ ಸಿಆರ್‌ಪಿಸಿ ಸೆಕ್ಷನ್ ೧೪೪ ಪ್ರಕಾರ ನಿಷೇಧಾಜ್ಞೆ ಜಾರಿಯಲಿದ್ದು, ಐದಕ್ಕಿಂತ ಅಧಿಕ ಮಂದಿ ಗುಂಪುಗೂಡುವಂತಿಲ್ಲ. ಕರ್ಫೂ ಹೇರಲಾಗಿದ್ದ ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ನಿಗಾ ಇಡುವ ಸಲುವಾಗಿ ಸಿಸಿಟಿವಿ ಕ್ಯಾಮೆರಾಗಳ ಜತೆಗೆ ೫೦೦ಕ್ಕೂ ಹೆಚ್ಚು ವಿಡಿಯೋ ಕ್ಯಾಮೆರಾ ಮತ್ತು ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಸ್ಥಳದಲ್ಲಿನಿಯೋಜಿಸಲಾಗಿದೆ.
9480801000 ಗೆ ವಾಟ್ಸಾಪ್ ಮಾಡಿ
ಸಾರ್ವಜನಿಕರು ನಗರ ಪೊಲೀಸ್ ಕಮಿಷನರೇಟ್‌ನ ಅಧಿಕೃತ ವಾಟ್ಸಾಪ್, ಟ್ವಿಟ್ಟರ್ ಮತ್ತು ಫೇಸ್‌ಬುಕ್ ಖಾತೆಗಳನ್ನು ಗಮನಿಸುವಂತೆ ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. ಒಂದು ವೇಳೆ ಅಹಿತಕರ ಘಟನೆಗಳು ನಡೆದರೆ, ಪೊಲೀಸ್ ಇಲಾಖೆಯ ಟ್ವಿಟರ್ ಖಾತೆ ಅಥವಾ ಮೊಬೈಲ್ ನಂಬರ್ 9480801000 (ಎಸ್‌ಎಂಎಸ್ ಅಥವಾ ವಾಟ್ಸ್‌ಆ್ಯಪ್ ಮೂಲಕ) ಕಳುಹಿಸಬಹುದು ಎಂದು ಅವರು ವಿನಂತಿಸಿದ್ದಾರೆ.
ಮದ್ಯ ಮಾರಾಟ ನಿಷೇಧ
ಕಾವೇರಿ ನೀರು ಹರಿಸುವ ಸಂಬಂಧ ಮಂಗಳವಾರ ಸುಪ್ರೀಂ ಕೋರ್ಟ್ ಆದೇಶ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಆದೇಶಿಸಿದ್ದಾರೆ. ಸೆ.೨೦ರಂದು ಬೆಳಗ್ಗೆ ೬ ಗಂಟೆಯಿಂದ ಮಧ್ಯರಾತ್ರಿ ೧ ಗಂಟೆವರೆಗೆ ನಗರದ ಕಮಿಷನರೇಟ್ ವ್ಯಾಪ್ತಿಯ ಬಾರ್, ವೈನ್‌ಶಾಪ್‌ಗಳು, ಪಬ್ ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಮಾರಾಟ ಮಾಡದಂತೆ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
