ಇಂದಿರಾ ಗಾಂಧಿಯನ್ನು ಹಿಟ್ಲರ್ ಗೆ ಹೋಲಿಸಿದ ಜೇಟ್ಲಿ!

ಇಂದಿರಾ ಗಾಂಧಿಯನ್ನು ಹಿಟ್ಲರ್ ಗೆ ಹೋಲಿಸಿದ ಜೇಟ್ಲಿ

ಹಿಟ್ಲರ್ ಮಾಡಿದ್ದನ್ನೇ ಇಂದಿರಾ ಮಾಡಿದ್ದು ಎಂದ ಸಚಿವ

ಸಾಂವಿಧಾನಿಕ ಸರ್ವಾಧಿಕಾರವಾಗಿ ಮೆರೆಯಲು ಸಂಚು

ದೇಶವನ್ನು ವಂಶಾಡಳಿತಕ್ಕೆ ಒಳಪಡಿಸಲು ಷಡ್ಯಂತ್ರ

Hitler And Mrs Gandhi: Arun Jaitley's Attack On Emergency Of 1975

ನವದೆಹಲಿ(ಜೂ.25): ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರನ್ನು ಜರ್ಮನಿಯ ಸರ್ವಾಧಿಕಾರಿ ಅಡೊಲ್ಫ್ ಹಿಟ್ಲರ್ ಗೆ ಹೋಲಿಸಿದ್ದಾರೆ. ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವವನ್ನು ಸಾಂವಿಧಾನಿಕ ಸರ್ವಾಧಿಕಾರವಾಗಿ ಪರಿವರ್ತಿಸಿದ್ದರು ಎಂದು ಜೇಟ್ಲಿ ಆರೋಪಿಸಿದ್ದಾರೆ.

1975ರ ಜೂನ್ 25ರಂದು ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತು ತಮ್ಮ ಫೇಸ್‌ಬುಕ್ ನಲ್ಲಿ ಸುಧೀರ್ಘವಾಗಿ ಮೂರು ಭಾಗಗಳಲ್ಲಿ ಪ್ರಕಟಿಸುತ್ತಿರುವ ಅರುಣ್ ಜೇಟ್ಲಿ, ಈಗಾಗಲೇ ಮೊದಲನೇ ಮತ್ತು ಎರಡನೇ ಭಾಗವನ್ನು ಪ್ರಕಟಗೊಳಿಸಿದ್ದಾರೆ. ಮೂರನೇ ಭಾಗ ಪ್ರಕಟವಾಗಬೇಕಾಗಿದ್ದು, ಇದರಲ್ಲಿನ ಪ್ರಮುಖ ಅಂಶಗಳನ್ನು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಎರಡನೇ ಭಾಗದಲ್ಲಿ ಇಂದಿರಾ ಗಾಂಧಿ ಮತ್ತು ಹಿಟ್ಲರ್ ಸಂವಿಧಾನವನ್ನು ರದ್ದುಗೊಳಿಸಲಿಲ್ಲ. ಅವರು ಪ್ರಜಾಪ್ರಭುತ್ವವನ್ನು ಸರ್ವಾಧಿಕಾರವನ್ನಾಗಿ ರೂಪಿಸಲು ಸಂವಿಧಾನವನ್ನೇ ಬಳಸಿಕೊಂಡಿದ್ದರು ಎಂದು ಜೇಟ್ಲಿ ಉಲ್ಲೇಖಿಸಿದ್ದಾರೆ. ಪ್ರತಿಪಕ್ಷಗಳು ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಸಂಚು ಹೂಡಿವೆ ಎಂದು ವಾದ ಮಾಡಿ, ಸಂವಿಧಾನದ ವಿಧಿ 352ರ ಅಡಿಯಲ್ಲಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಇದು ಹಿಟ್ಲರ್ ಧೋರಣೆಯ ಅನುಕರಣೆಯಾಗಿತ್ತು.

ಹಿಟ್ಲರ್ ತನ್ನ ಅಧಿಕಾರದಲ್ಲಿ ಸಂಸತ್‍ನ ಬಹುತೇಕ ಪ್ರತಿಪಕ್ಷ ನಾಯಕರನ್ನು ಬಂಧಿಸಿ, ಕಡಿಮೆ ಸಂಖ್ಯಾಬಲ ಹೊಂದಿದ್ದ ಸರ್ಕಾರವನ್ನು 2/3 ಬಹುಮತದ ಸರ್ಕಾರವನ್ನಾಗಿ ಪರಿವರ್ತಿಸಿದ್ದು ಇದೇ ರೀತಿ ಇಂದಿರಾ ಗಾಂಧಿ ಸಂಚು ರೂಪಿಸಿದ್ದರು ಎಂದು ಕೇಂದ್ರ ಸಚಿವರು ತಮ್ಮ ಬರಹದಲ್ಲಿ ಆರೋಪಿಸಿದ್ದಾರೆ. ಇಂದಿರಾ ಗಾಂಧಿ ಕಾನೂನಿನಲ್ಲಿ ಬದಲಾವಣೆ ಮಾಡುವ ಮೂಲಕ ಅಮಾನ್ಯ ಚುನಾವಣೆಯನ್ನು ಮಾನ್ಯ ಮಾಡುವುದಕ್ಕೋಸ್ಕರ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದಿದ್ದರು. ಭಾರತವನ್ನು ವಂಶಾಡಳಿತಕ್ಕೆ ಒಳಪಡಿಸಲು ಇಂದಿರಾ ಗಾಂಧಿ ಮುಂದಾಗಿದ್ದರು ಎಂದು ಅರುಣ್ ಜೇಟ್ಲಿ ಆರೋಪಿಸಿದ್ದಾರೆ.

ಇದೇ ವೇಳೆ ತುರ್ತು ಪರಿಸ್ಥಿತಿಯ ವಿರುದ್ಧದ ತಮ್ಮ ಮೊದಲ ಸತ್ಯಾಗ್ರಹವನ್ನು ನೆನಪಿಸಿಕೊಂಡ ಜೇಟ್ಲಿ,  1975ರ ಜೂನ್ 26ರಂದು ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪ್ರತಿಭಟನೆಯ ನೇತೃತ್ವ ವಹಿಸಿದ್ದಕ್ಕೆ ತಮ್ಮನ್ನು ತಿಹಾರ್ ಜೈಲಿಗೆ ಅಟ್ಟಿದ್ದರು ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios