ಮುಂಬೈ(ಜೂ.21): ಬಿಜೆಪಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಮಿತ್ರ ಪಕ್ಷ ಶಿವಸೇನೆ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ದುರಾಸೆಯನ್ನು ಇತಿಹಾಸ ಎಂದಿಗೂ ಕ್ಷಮಿಸಲ್ಲ ಎಂದು ಹೇಳಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರ ನಿಯಂತ್ರಿಸಲು ಬಿಜೆಪಿ ಸಂಪೂರ್ಣ ವಿಫಲವಾಗಿದ್ದು, ಈಗ ಪಿಡಿಪಿ ವಿರುದ್ಧ ಆರೋಪ ಮಾಡುತ್ತಿದೆ. ಇದು ಬ್ರಿಟಿಷರನ್ನು ಭಾರತದಿಂದ ಹೊರ ಹಾಕಿದಂತಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಆರೋಪಿಸಿದೆ.

ಪಿಡಿಪಿ ಜೊತೆ ಸೇರಿ ಅಧಿಕಾರ ಅನುಭವಿಸಿ ಕೊನೆ ಗಳಿಗೆಯಲ್ಲಿ ಜವಾಬ್ದಾರಿಯಿಂದ ನುಣುಚಿಕೊಂಡ ನಡೆ ಖಂಡಿತ ಸಹ್ಯವಲ್ಲ ಎಂದು ಶಿವಸೇನೆ ಹೇಳಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಸೇನೆ, ದೇಶ ಮುನ್ನಡೆಸುವುದು ಮಕ್ಕಳ ಆಟ ಅಲ್ಲ ಎಂಬುದು ಅವರಿಗೆ ಮನವರಿಕೆ ಆಗಿದ್ದರೆ ಒಳ್ಳೆಯದು ಎಂದು ಅಪಹಾಸ್ಯ ಮಾಡಿದೆ. 

ಕಣಿವೆ ರಾಜ್ಯದಲ್ಲಿ ಬಿಜೆಪಿ, ಪಿಡಿಪಿಗೆ ನೀಡಿದ್ದ ಬೆಂಬಲ ಹಿಂಪಡೆದ ಹಿನ್ನೆಲೆಯಲ್ಲಿ ಸಮಿಶ್ರ ಸರ್ಕಾರ ಪತನಗೊಂಡಿದ್ದು, ನಿನ್ನೆ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ. ಬಿಜೆಪಿ ಕಾಶ್ಮೀರದಲ್ಲಿ ಅರಾಜಕತೆ ಸೃಷ್ಟಿಸಿದ ನಂತರ ಅಧಿಕಾರದಿಂದ ಹೊರ ಬಂದಿದೆ ಎಂದು ಶಿವಸೇನೆ ಆರೋಪಿಸಿದೆ.