ಬೆಂಗಳೂರು[ಸೆ.26]: ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಭಿನ್ನಮತ ಶುರುವಾಗಿದ್ದು, ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲೂ ಅಸಮಾಧಾನ ತೀವ್ರಗೊಂಡಿದೆ.

ಅನರ್ಹಗೊಂಡಿರುವ ಶಾಸಕ ಬಿ.ಸಿ.ಪಾಟೀಲ್‌ ಮತ್ತು ಮಾಜಿ ಶಾಸಕ ಯು.ಬಿ.ಬಣಕಾರ್‌ ನಡುವೆ ಉಂಟಾಗಿರುವ ಮನಸ್ತಾಪವನ್ನು ಪರಿಹರಿಸಲು ಖುದ್ದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಮುಂದಾಗಿ ನಡೆಸಿದ ಸಂಧಾನ ಪ್ರಯತ್ನ ಸಫಲವಾಗದೆ ಇರುವುದು ಪಕ್ಷದಲ್ಲಿ ಆತಂಕ ಉಂಟು ಮಾಡಿದೆ.

ಮಂಗಳವಾರ ತಡರಾತ್ರಿ ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ಉಭಯ ಮುಖಂಡರನ್ನು ಕರೆಸಿಕೊಂಡು ಮಾತುಕತೆ ನಡೆಸಿದರು. ಈ ವೇಳೆ ಹಾವೇರಿ ಜಿಲ್ಲಾ ಉಸ್ತುವಾರಿ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರೂ ಉಪಸ್ಥಿತರಿದ್ದರು. ಆದರೆ, ಕಳೆದ ಬಾರಿ ಕಡಮೆ ಮತಗಳ ಅಂತರದಿಂದ ಸೋಲುಂಡಿದ್ದ ಬಣಕಾರ್‌ ಅವರು ಈ ಬಾರಿ ಹಿಂದೆ ಸರಿಯಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಬಿ.ಸಿ.ಪಾಟೀಲ್‌ ಪಾತ್ರ ಬಹಳ ಮುಖ್ಯವಾಗಿದ್ದು, ಅವರು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು. ಒಂದೊಂದು ಕ್ಷೇತ್ರವು ನಮ್ಮ ಸರ್ಕಾರಕ್ಕೆ ಅತ್ಯಂತ ಪ್ರಮುಖವಾಗಿರುವುದರಿಂದ ಕ್ಷೇತ್ರದಲ್ಲಿ ಪಾಟೀಲ್‌ ಪರ ಕೆಲಸ ಮಾಡಬೇಕು. ಪಾಟೀಲ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾರಣದಿಂದಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಗಿದೆ. ಅವರ ತ್ಯಾಗ ದೊಡ್ಡರು. ಉಪಚುನಾವಣೆಯಲ್ಲಿ ಟಿಕೆಟ್‌ ನೀಡುವುದಾಗಿ ಮಾತು ಕೊಟ್ಟಿದ್ದು, ಉಪಚುನಾವಣೆಯಲ್ಲಿ ನೀವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಿಮಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಣಕಾರ್‌ ಮನವೊಲಿಕೆಗೆ ಪ್ರಯತ್ನಿಸಿದರು ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಸಲಹೆಗಳನ್ನು ಒಪ್ಪದ ಬಣಕಾರ್‌ ಅವರು, ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನಮ್ಮಿಬ್ಬರಿಗೂ ಪೈಪೋಟಿ ಇದೆ. ಹಿಂದಿನ ಚುನಾವಣೆಯಲ್ಲಿ ಅವರ ಕಾರ್ಯಕರ್ತರು, ನಮ್ಮ ಕಾರ್ಯಕರ್ತರು ಬಡಿದಾಡಿಕೊಂಡಿದ್ದಾರೆ. ಈಗ ಬಿ.ಸಿ.ಪಾಟೀಲ್‌ ಜತೆ ಓಡಾಡಿದರೆ ಕಾರ್ಯಕರ್ತರ ಗತಿ ಏನಾಗಬೇಕು. ಯಾವ ಮುಖವಿಟ್ಟುಕೊಂಡು ಅವರ ಪರ ಕೆಲಸ ಮಾಡಬೇಕು. ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪಾಟೀಲ್‌ ಪರ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ತಿಳಿಸಿದರೆ ಒಪ್ಪುವರೇ ಎಂದು ತೀಕ್ಷ$್ಣವಾಗಿ ಪ್ರಶ್ನಿಸಿದರು ಎನ್ನಲಾಗಿದೆ.

ಒಮ್ಮೆ ಹಿರೇಕೆರೂರಿಗೆ ಬನ್ನಿ, ನಿಮಗೆ ವಾಸ್ತವ ಸ್ಥಿತಿ ಗೊತ್ತಾಗಲಿದೆ. ಕ್ಷೇತ್ರದ ಪರಿಸ್ಥಿತಿ ಅಂದುಕೊಂಡಂತೆ ಸುಲಭ ಇಲ್ಲ ಎಂದು ಯಡಿಯೂರಪ್ಪ ಅವರಿಗೆ ಕ್ಷೇತ್ರದ ಪರಿಸ್ಥಿತಿ ಕುರಿತು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಆದರೆ, ಯಡಿಯೂರಪ್ಪ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣಕ್ಕಾಗಿ ಪಾಟೀಲ್‌ ಪರ ಕೆಲಸ ಮಾಡಲು ಮನಸ್ಸಿಲ್ಲ ಎಂದು ಬಣಕಾರ್‌ ಅವರು ಅಲ್ಲಿಂದ ನಿರ್ಗಮಿಸಿದರು ಎಂದು ತಿಳಿದುಬಂದಿದೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.