ಉತ್ಪಾಧನೆ ಸ್ಥಗಿತಗೊಳಿಸುವ ಕಡೆಯ ದಿನಗಳಲ್ಲಿ ದಿನಕ್ಕೆ ಕೇವಲ 5 ಅಂಬಾಸಿಡರ್ ಕಾರುಗಳನ್ನು ಮಾತ್ರ ಉತ್ಫಾದಿಸಲಾಗುತ್ತಿತ್ತು.
ಕೋಲ್ಕತಾ(ಫೆ.11): ಶ್ರೀಸಾಮಾನ್ಯರಿಂದ ಹಿಡಿದು ಪ್ರಧಾನಿವರೆಗೆ ಎಲ್ಲರಿಗೂ ಅಚ್ಚುಮೆಚ್ಚಿನ ವಾಹನವಾಗಿದ್ದ ಅಂಬಾಸಿಡರ್ ಕಾರಿನ ಬ್ರ್ಯಾಂಡ್ ಈಗ ಮಾರಾಟವಾಗಿದೆ.
ಫ್ರಾನ್ಸ್‌ನ ಕಾರು ತಯಾರಿಕಾ ಕಂಪನಿ ಪ್ಯೂಜೆ, 80 ಕೋಟಿ ರೂಪಾಯಿಗೆ ಅಂಬಾಸಿಡರ್ ಬ್ರ್ಯಾಂಡ್ ಅನ್ನು ತನ್ನದಾಗಿಸಿಕೊಂಡಿದೆ.
ಪ್ಯೂಜೆ ಕಂಪನಿ ಹಳೆಯ ವಿನ್ಯಾಸದಲ್ಲೇ ಅಂಬಾಸಿಡರ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದ್ದು, ತನ್ನ ಹೊಸ ಕಾರೊಂದಕ್ಕೆ ಅಂಬಾಸಿಡರ್ ಹೆಸರನ್ನು ಬಳಸಿಕೊಳ್ಳುವ ಸಂಭವವಿದೆ ಎಂದು ಹೇಳಲಾಗಿದೆ.
ಮಾರುತಿ- ಸುಜುಕಿ ಕಂಪನಿಯ ಹವಾ ಆರಂಭವಾಗುವ ಮುನ್ನ 1960 ಹಾಗೂ 70ರ ದಶಕದಲ್ಲಿ ಅಂಬಾಸಿಡರ್ ಕಾರು ಭಾರತೀಯರ ಅಚ್ಚುಮೆಚ್ಚಿನ ಆಯ್ಕೆಯಾಗಿತ್ತು. ಅದು ಪ್ರತಿಷ್ಠೆಯ ಸಂಕೇತ ಕೂಡಾ ಆಗಿತ್ತು. ಆದರೆ ಈಗಿನ ಮಾರುಕಟ್ಟೆಯಲ್ಲಿ ಅಂಬಾಸಿಡರ್'ಗೆ ಪೈಪೋಟಿ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮೂರು ವರ್ಷಗಳ ಹಿಂದೆಯೇ ಕಾರು ಉತ್ಪಾದನೆ ಸ್ಥಗಿತಗೊಂಡಿತ್ತು.
ಅಂಬಾಸಿಡರ್ ಬ್ರ್ಯಾಂಡ್ ಮಾರಾಟದಿಂದ ಬರುವ 80 ಕೋಟಿ ರೂಪಾಯಿ ಹಣವನ್ನು ನೌಕರರ ಬಾಕಿ ತೀರಿಸಲು ಹಾಗೂ ಸಾಲ ಮರುಪಾವತಿಸಲು ಬಳಕೆ ಮಾಡಿಕೊಳ್ಳುವುದಾಗಿ ಅದರ ಮಾಲೀಕತ್ವ ಹೊಂದಿದ್ದ ಸಿ.ಕೆ. ಬಿರ್ಲಾ ಗ್ರೂಪ್ ಒಡೆತನದ ಹಿಂದುಸ್ತಾನ್ ಮೋಟರ್ಸ್ ತಿಳಿಸಿದೆ.
ಅಂಬಾಸಿಡರ್ ಇತಿಹಾಸ:
1958 ರಲ್ಲಿ ಅಂಬಾಸಿಡರ್ ಉತ್ಫಾದನೆ ಆರಂಭವಾಯಿತು.
1980ರ ಮಧ್ಯ ಭಾಗದಲ್ಲಿ ವರ್ಷಕ್ಕೆ 24ಸಾವಿರ ಕಾರುಗಳನ್ನು ಉತ್ಫಾದಿಸಲಾಗುತ್ತಿತ್ತು.
2013-14ರಲ್ಲಿ ಕೇವಲ 2,439 ಕ್ಕೆ ಕುಸಿದ ಕಾರುಗಳ ಉತ್ಫಾದನೆ.
ಉತ್ಪಾಧನೆ ಸ್ಥಗಿತಗೊಳಿಸುವ ಕಡೆಯ ದಿನಗಳಲ್ಲಿ ದಿನಕ್ಕೆ ಕೇವಲ 5 ಅಂಬಾಸಿಡರ್ ಕಾರುಗಳನ್ನು ಮಾತ್ರ ಉತ್ಫಾದಿಸಲಾಗುತ್ತಿತ್ತು.
