ಆಗ್ರಾ[ಮೇ.29]: ಹಿಂದೂ ಮಹಾಸಭಾದ ಸ್ಥಾಪಕ ವೀರ್ ಸಾವರ್ಕರ್ ಜಯಂತಿಯಂದು ಅಖಿಲ ಭಾರತೀಯ ಹಿಂದೂ ಸಭಾ ಸಂಘಟನೆಯು 10 ನೇ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಚೂರಿ ಹಂಚಿರುವ ಘಟನೆ ಮಂಗಳವಾರ ನಡೆದಿದೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಹಿಂದೂಸಭಾದ ವಕ್ತಾರ ಅಶೋಕ್ ಪಾಂಡೆ ರಾಜನೀತಿಯ ಹಿಂದೂಕರಣ ಹಾಗೂ ಹಿಂದೂಗಳ ಸೈನ್ಯ ಸಾವರ್ಕರ್ ಕನಸಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಮೋದೀಜಿ ಅವರ ಕನಸಿನ ಮೊದಲ ಭಾಗವನ್ನು ಸಾಕಾರಗೊಳಿಸಿದ್ದಾರೆ. ಈಗ ನಾವು ಚೂರಿಗಳನ್ನು ಹಂಚಿ, ಹಿಂದೂ ಸೈನಿಕರನ್ನು ರೂಪಿಸುವ ಮೂಲಕ ಸಾವರ್ಕರ್ ಕನಸಿನ ಎರಡನೇ ಭಾಗವನ್ನು ಪೂರ್ಣಗೊಳಿಸುತ್ತಿದ್ದೇವೆ' ಎಂದಿದ್ದಾರೆ.

ಇಷ್ಟೇ ಅಲ್ಲದೇ 'ಹಿಂದೂಗಳು ತಮ್ಮನ್ನು ಹಾಗೂ ದೇಶವನ್ನು ರಕ್ಷಿಸಿಕೊಳ್ಳಬೇಕಾದರೆ ಆಯುಧಗಳನ್ನು ಹೇಗೆ ಬಳಸಬೇಕು ಎಂಬುವುದನ್ನು ಕಲಿಯಬೇಕು' ಎಂದಿದ್ದಾರೆ. ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಪೂಜಾ ಶಕುನ್ ಪಾಂಡೆ ಮಾತನಾಡುತ್ತಾ ಇದು ಹಿಂದೂಗಳನ್ನು ಪ್ರೋತ್ಸಾಹಿಸಿ, ಇನ್ನಷ್ಟು ಬಲಶಾಲಿಯಾಗಿಸಲು ನಾವು ತೆಗೆದುಕೊಂಡ ಮೊದಲ ಹೆಜ್ಜೆ. ಈ ಮೂಲಕ ಹಿಂದುಗಳು ಅದರಲ್ಲೂ ವಿಶೇಷವಾಗಿ ಯುವಕರು ಚೂರಿಗಳನ್ನು ಹಿಡಿದು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಲಿಯಬೇಕು ಎಂದಿದ್ದಾರೆ.