ದೋಬಿಘಾಟ್‌ನಲ್ಲಿ ಮೂಲ ಸೌಲಭ್ಯಗಳ ಕೊರತೆ ನೀಗಿಸಲು 2.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಅನುದಾನ ಬಳಸಿಕೊಂಡು ಮೂಲ ಸೌಕರ್ಯ ಒದಗಿಸಿ, ನಿರಂತರ ನೀರು ಸರಬರಾಜು ವ್ಯವಸ್ಥೆ ಜತೆಗೆ ಅಭಿವೃದ್ಧಿ ಕಾರ್ಯ ...

ಬೆಂಗಳೂರು(ಡಿ.10): ನಗರದ ವಿವಿಧೆಡೆಗಳಲ್ಲಿರುವ ದೋಬಿಘಾಟ್‌ಗಳಿಗೆ ಭೇಟಿ ನೀಡಿ ಶುಕ್ರವಾರ ಪರಿಶೀಲನೆ ನಡೆಸಿದ ಮೇಯರ್ ಜಿ. ಪದ್ಮಾವತಿ ಅವರು ದೋಬಿಘಾಟ್‌ಗಳಿಗೆ ಹೈಟೆಕ್ ಸ್ಪರ್ಶ ನೀಡಲು ಚಿಂತನೆ ನಡೆಸಿದ್ದಾರೆ.

ಪರಿಶೀಲನೆ ಬಳಿಕ ಮಾತನಾಡಿದ ಅವರು, ಮಲ್ಲೇಶ್ವರ 15ನೇ ಅಡ್ಡರಸ್ತೆಯಲ್ಲಿರುವ ಹೈಟೆಕ್ ದೋಬಿಘಾಟ್ ಮಾದರಿಯಲ್ಲಿಯೇ ನಗರದಲ್ಲಿ 31 ದೋಬಿಘಾಟ್‌ಗಳನ್ನು ಉನ್ನತೀಕರಿಸಲು ಯೋಜನೆ ರೂಪಿಸಲಾಗುವುದು. ಪಶ್ಚಿಮ ಕಾರ್ಡ್ ರಸ್ತೆಯ ಶಿವನಗರ ವಾರ್ಡ್‌ನಲ್ಲಿರುವ ದೋಬಿಘಾಟ್‌ನಲ್ಲಿ ಮೂಲ ಸೌಲಭ್ಯಗಳ ಕೊರತೆ ನೀಗಿಸಲು 2.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಅನುದಾನ ಬಳಸಿಕೊಂಡು ಮೂಲ ಸೌಕರ್ಯ ಒದಗಿಸಿ, ನಿರಂತರ ನೀರು ಸರಬರಾಜು ವ್ಯವಸ್ಥೆ ಜತೆಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಯೋಜನಾ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ಮಲ್ಲೇಶ್ವರದಲ್ಲಿರುವ ಸುಸಜ್ಜಿತವಾದ ಹೈಟೆಕ್ ದೋಬಿಘಾಟ್ ಸುಸಜ್ಜಿತ ಯಂತ್ರಗಳಿಂದ ಕಾರ್ಯ ನಿರ್ವಸುತ್ತಿದೆ. ಇದೇ ಮಾದರಿಯಲ್ಲಿ ನಗರದ ಬೇರೆ ಬೇರೆ ಪ್ರದೇಶಗಳಲ್ಲಿರುವ ಸುಮಾರು 31 ದೋಬಿಘಾಟ್‌ಗಳನ್ನು ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗುವುದು. ದೋಬಿಘಾಟ್‌ನಲ್ಲಿ 272 ಕುಟುಂಬಗಳಿಗೆ ಅವಕಾಶ ಕಲ್ಪಿಸಿದ್ದು, ಶೀಘ್ರವೇ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು. ಖಾಲಿ ಜಾಗದಲ್ಲಿ ವಸತಿ ಕಟ್ಟಡಗಳನ್ನು ಸಹ ನಿರ್ಮಿಸಲಾಗುವುದು ಎಂದರು.

ಬ್ಯಾಟರಾಯನಪುರ ದೋಬಿಘಾಟ್‌ನಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿಯೇ 1 ಕೋಟಿ ರೂ. ಮೀಸಲಿರಿಸಲಾಗಿದೆ. ಅಗತ್ಯಬಿದ್ದರೆ ಹೆಚ್ಚುವರಿ ಅನುದಾನ ನೀಡಿ ಹೈಟೆಕ್ ಸ್ಪರ್ಶ ನೀಡಲಾಗುವುದು. ಈ ಸಂಬಂಧ ಸಂಬಂಧಿಸಿದ ತಜ್ಞ ಸಲಹೆಗಾರರೊಂದಿಗೆ ಚರ್ಚಿಸಿ ವಿದ್ಯುತ್ ಯೋಜನಾವರದಿ ತಯಾರಿಸಲು ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಸುರೇಶಕುಮಾರ್, ಜೆಡಿಎಸ್ ಪಕ್ಷದ ನಾಯಕಿ ಆರ್.ರಮಿಳಾ ಉಮಾಶಂಕರ್, ಪಾಲಿಕೆ ಸದಸ್ಯರಾದ ಮಂಜುಳಾ, ಮಂಜುನಾಥ್ ರಾಜು ಹಾಗೂ ಮಂಜುನಾಥ ಬಾಬು ಹಾಜರಿದ್ದರು.