ನೌಕರರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ನೀಡಲು ಸಂಸ್ಥೆ ಅಧ್ಯಕ್ಷ ನಾಗರಾಜ್ ಯಾದವ್ ನಗರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿದ್ದಾರೆ.

-ಮೋಹನ್ ಭದ್ರಾವತಿ

ಬೆಂಗಳೂರು(ನ.30):ಬಿಎಂಟಿಸಿ ನೌಕರರು ಇನ್ಮುಂದೆ ತಮ್ಮದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ನಿಗಮದ ನೌಕರರಿಗಾಗಿ ನಗರದಲ್ಲೊಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರೂಪರೇಷೆ ಸಿದ್ಧಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಷ್ಟು ದಿನ ಸಂಸ್ಥೆ ನಗರದ ಇತರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೆ, ಕೆಲ ಆಸ್ಪತ್ರೆಗಳಲ್ಲಿ ನೌಕರರನ್ನು ನಿರ್ಲಕ್ಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನೌಕರರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ನೀಡಲು ಸಂಸ್ಥೆ ಅಧ್ಯಕ್ಷ ನಾಗರಾಜ್ ಯಾದವ್ ನಗರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿದ್ದಾರೆ. ನಗರದಲ್ಲಿರುವ ನಿಗಮದ ಖಾಲಿ ಜಾಗವನ್ನು ಗುರುತಿಸಲು ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ ತಗುಲುವ ವೆಚ್ಚ ಕುರಿತು ಸಂಪೂರ್ಣ ನೀಲನಕ್ಷೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನೌಕರರಿಗೆ ಅನುಕೂಲವಾಗುವ ರೀತಿಯಲ್ಲಿ ಸುಸರ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸಂಸ್ಥೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದೆ. ಹಾಗಾಗಿ ಸರ್ಕಾರಿ-ಖಾಸಗಿ ಪಾಲುದಾರಿಕೆಯಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಪ್ರಮುಖವಾಗಿ ನಿಗಮದ ೩೬ ಸಾವಿರ ನೌಕರರು ಹಾಗೂ ಕುಟುಂಬ ಸದಸ್ಯರಿಗೆ ಪುಕ್ಕಟೆಯಾಗಿ ಸೌಲಭ್ಯ ನೀಡಲು ಚಿಂತಿಸಲಾಗಿದೆ. ಈ ಕುರಿತು ಸಿವಿಲ್, ಕಾರ್ಮಿಕ ಹಾಗೂ ವೈದ್ಯಕೀಯ ವಿಭಾಗದ ಅಧಿಕಾರಿಗಳ ಜತೆ ನಿರಂತರ ಸಭೆ ನಡೆಸಲಾಗಿದೆ.

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಇರಬೇಕು. ಯಾವ ವೈದ್ಯಕೀಯ ಸೇವೆ(ಹೃದಯ, ನರರೋಗ, ಇಎನ್‌ಟಿ, ಆರ್ಥೋಪೆಟಿಕ್ ಹಾಗೂ ಇತರೆ) ಒದಗಿಸಬೇಕು ಎಂಬೆಲ್ಲಾ ವಿಚಾರವನ್ನು ನಿಗಮದ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಬಳಿಕ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವ ಸಲ್ಲಿಸಲಾಗುತ್ತದೆ. ಬಳಿಕ ಸಿಎಂ ಸಿದ್ದರಾಮಯ್ಯ ಅವರು ಸಹ ಅಧಿವೇಶನದ ಬಳಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಇದರೊಂದಿಗೆ ಪಾಲುದಾರಿಕೆಯಲ್ಲಿ ಪಾಲ್ಗೊಳ್ಳುವ ಖಾಸಗಿ ಕಂಪೆನಿಯ ಹಿನ್ನೆಲೆ ತಿಳಿದುಕೊಂಡು ಪಾಲುದಾರಿಕೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ಕೆಎಸ್‌ಆರ್‌ಟಿಸಿಗೂ ವಿಸ್ತರಣೆ

ಬಿಎಂಟಿಸಿ ನೇತೃತ್ವದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದರು ಇದರ ಸೇವೆಯನ್ನು ಕೆಎಸ್‌ಆರ್‌ಟಿಸಿ, ಎನ್‌ಡ್ಲ್ಯೂಕೆಎಸ್‌ಆರ್‌ಟಿಸಿ, ಎನ್‌ಇಕೆಎಸ್‌ಆರ್‌ಟಿಸಿ ನಿಗಮ ಹಾಗೂ ಇತರೆ ಇಲಾಖೆಯ ಸಿಬ್ಬಂದಿ ಸಹ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಸದ್ಯ ಬಿಎಂಟಿಸಿ ಮಾತ್ರ ಆಸ್ಪತ್ರೆ ನಿರ್ಮಿಸಲು ಆಸಕ್ತಿ ಹೊಂದಿದೆ ಎಂದರು.

ತೆರಿಗೆ ರಿಯಾಯಿತಿಗೆ ಮನವಿ

ಬಿಎಂಟಿಸಿಯಿಂದ ವರ್ಷಕ್ಕೆ ೧೨೦ ಕೋಟಿ ರುಪಾಯಿ ವಾಹನ ತೆರಿಗೆ ಹಾಗೂ ₹೧೦ ಕೋಟಿ ಟೋಲ್ ಕಟ್ಟುತ್ತಿದ್ದೇವೆ. ಇದರಿಂದ ಸಂಸ್ಥೆಗೆ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತೆರಿಗೆ ರಿಯಾಯಿತಿಗೆ ಮನವಿ ಮಾಡುತ್ತೇವೆ. ಇದರೊಂದಿಗೆ ಕಳೆದ ಮೂರು ವರ್ಷಗಳಿಂದ ಹೊಸ ಬಸ್‌ಗಳು ಖರೀದಿಸಿಲ್ಲ. ಇದರಿಂದ ಸುಮಾರು ೪೫೦ ಶೆಡ್ಯೂಲ್‌ಗಳು ಸ್ಥಗಿತಗೊಂಡಿದ್ದು, ಸಂಸ್ಥೆಗೆ ಸಾಕಷ್ಟು ನಷ್ಟವಾಗುತ್ತಿದೆ. ಸದ್ಯದಲ್ಲೇ ಹೊಸ ಬಸ್‌ಗಳ ಖರೀದಿ ಮಾಡುತ್ತೇವೆ ಎಂದು ನಾಗರಾಜ್ ಯಾದವ್ ತಿಳಿಸಿದ್ದಾರೆ.