Asianet Suvarna News Asianet Suvarna News

ಜಾಹೀರಾತು ಫಲಕಗಳಲ್ಲಿ ಬದಲಾವಣೆ

ಜಾಹೀರಾತು ಫಲಕಗಳಲ್ಲಿ ಶೇ.100ರಷ್ಟುಕಾಟನ್‌ ಬಳಸಲಾಗುತ್ತಿದೆ ಎಂದು ಸ್ಪಷ್ಪಪಡಿಸಿ 12 ಜಾಹಿರಾತು ಕಂಪನಿಗಳು ಸಲ್ಲಿಸಿರುವ ಪ್ರಮಾಣಪತ್ರಗಳ ಬಗ್ಗೆ ಪ್ರತಿಕ್ರಿಯಿಸಲು ಬಿಬಿಎಂಪಿಗೆ ಹೈ ಕೋರ್ಟ್ ಆದೇಶ ನೀಡಿದೆ. 

High court Orders  BBMP to verify The Quality Of Flex
Author
Bengaluru, First Published Dec 13, 2018, 10:26 AM IST

ಬೆಂಗಳೂರು :  ಜಾಹೀರಾತು ಫಲಕಗಳಲ್ಲಿ ಶೇ.100ರಷ್ಟುಕಾಟನ್‌ ಬಳಸಲಾಗುತ್ತಿದೆ ಎಂದು ಸ್ಪಷ್ಪಪಡಿಸಿ ವಿವಿಧ 12 ಜಾಹಿರಾತು ಕಂಪನಿಗಳು ಸಲ್ಲಿಸಿರುವ ಪ್ರಮಾಣಪತ್ರಗಳ ಕುರಿತು ಡಿ.17ರೊಳಗೆ ಸಮಗ್ರ ಪ್ರತಿಕ್ರಿಯೆ ಸಲ್ಲಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿಗೆ) ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

ನಗರದಲ್ಲಿನ ಅನಧಿಕೃತ ಫ್ಲೆಕ್ಸ್‌, ಹೋರ್ಡಿಂಗ್ಸ್‌ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸಲು ಕೋರಿ ಸಲ್ಲಿಕೆಯಾಗಿದ್ದ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌.ಸುಜಾತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಬಿಬಿಎಂಪಿಗೆ ಈ ಸೂಚನೆ ನೀಡಿತು. ಅಲ್ಲದೇ, ಡಿ.17ರೊಳಗೆ ಜಾಹಿರಾತು ನೀತಿ-ಬೈಲಾ ಅಂತಿಮಗೊಳಿಸುವಂತೆಯೂ ಇದೇ ವೇಳೆ ನಿರ್ದೇಶಿಸಿತು.

ಇದಕ್ಕೂ ಮುನ್ನ ಅನಧಿಕೃತವಾಗಿ ಜಾಹಿರಾತು ಫಲಕ ಅಳವಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ಆಟೋ, ಸರ್ಕಾರಿ ಬಸ್‌ಗಳಲ್ಲಿ ಫ್ಲೆಕ್ಸ್‌ ಬಳಸುತ್ತಿಲ್ಲ:  ರಾಜ್ಯ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ, ಆಟೋಗಳು ಹಾಗೂ ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ಅಳವಡಿಸುತ್ತಿರುವ ಜಾಹಿರಾತು ಫಲಕಗಳಲ್ಲಿ ಫ್ಲೆಕ್ಸ್‌ ಬಳಸಲಾಗುತ್ತಿಲ್ಲ. ಅಕ್ರಮವಾಗಿ ಜಾಹೀರಾತು ಫಲಕಗಳ ಅಳವಡಿಸಿದವರ ವಿರುದ್ಧ ಒಟ್ಟು 480 ಪ್ರಕರಣಗಳು ದಾಖಸಿಕೊಳ್ಳಲಾಗಿದೆ. ಆ ಪೈಕಿ 232 ಪ್ರಕರಣ ಮುಕ್ತಾಯಗೊಳಿಸಲಾಗಿದೆ ಎಂದು ತಿಳಿಸಿ ಪ್ರಮಾಣಪತ್ರ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಪೊಲೀಸ್‌ ಇಲಾಖೆ ಏಕೆ ವಿಳಂಬ ಮಾಡುತ್ತಿದೆ. ನ್ಯಾಯಾಲಯವು ಒಂದಿಷ್ಟುದಿನ ಈ ಬಗ್ಗೆ ಕೇಳಿಲ್ಲ ಎಂಬ ಮಾತ್ರಕ್ಕೆ ಸರ್ಕಾರ ಸುಮ್ಮನೆ ಕುಳಿತುಬಿಟ್ಟಿರುವುದು ಸರಿಯಲ್ಲ. ಬಾಕಿ ಪ್ರಕರಣಗಳ ತನಿಖೆ ಶೀಘ್ರ ಪೂರ್ಣಗೊಳಿಸಬೇಕು. ತಪ್ಪಿದರೆ ಪೊಲೀಸ್‌ ಆಯುಕ್ತರನ್ನು ಕೋರ್ಟ್‌ಗೆ ಕರೆಸಿ ಹೇಳಬೇಕಾಗುತ್ತದೆ ಎಂದು ಪೊನ್ನಣ್ಣಗೆ ಸೂಚಿಸಿತು.

ಬಿಬಿಎಂಪಿ ವಕೀಲರು ವಾದ ಮಂಡಿಸಿ, ಜಾಹೀರಾತು ಫಲಕಗಳಿಗೆ ದಂಡ ಹಾಗೂ ತೆರಿಗೆ ವಿಧಿಸಿದ, ಜಾಹೀರಾತು ಫಲಕ ತೆರವುಗೊಳಿಸದಂತೆ ತಡೆಯಾಜ್ಞೆ ತಂದಿರುವುದು ಸೇರಿ ಒಟ್ಟು 113 ತಕರಾರು ಅರ್ಜಿಗಳು ಹೈಕೋರ್ಟ್‌ಗೆ ಸಲ್ಲಿಕೆಯಾಗಿವೆ. ಇದಲ್ಲದೆ, ವಿವಿಧ ಅಧೀನ ನ್ಯಾಯಾಲಯಗಳಲ್ಲಿ 87 ಸಿವಿಲ್‌ ದಾವೆಗಳು ವಿಚಾರಣಾ ಹಂತದಲ್ಲಿವೆ. ಆದ್ದರಿಂದ ವಿವಿಧ ಅಧೀನ ನ್ಯಾಯಾಲಯಗಳಲ್ಲಿ ಇರುವ ಸಿವಿಲ್‌ ದಾವೆಗಳನ್ನು ಒಂದೇ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲು ಹೈಕೋರ್ಟ್‌ ಏಕಸದಸ್ಯಪೀಠ ಆದೇಶಿಸಿದೆ ಎಂದು ಮಾಹಿತಿ ನೀಡಿದರು.

ಈ ಮಧ್ಯೆ ಜಾಹೀರಾತು ಕಂಪನಿಯೊಂದು ಮಧ್ಯಂತರ ಅರ್ಜಿ ಸಲ್ಲಿಸಿ, ಕೆಎಸ್‌ಆರ್‌ಟಿಸಿ, ಎನ್‌ಈಕೆಆರ್‌ಟಿಸಿ, ಎನ್‌ಡಬ್ಲೂಕೆಆರ್‌ಟಿಸಿ ಮತ್ತು ಬಿಎಂಟಿಸಿ ನಿಲ್ದಾಣಗಳು ಮತ್ತು ಇವುಗಳಿಗೆ ಸೇರಿದ ಇತರೆ ಜಾಗದಲ್ಲಿ ನಾವು ಜಾಹಿರಾತು ಅಳವಡಿಸಿ, ನಿರ್ವಹಣೆ ಮಾಡುತ್ತಿದ್ದೇವೆ. ಆದರೆ, ಸಾರಿಗೆ ಇಲಾಖೆಯು ಫ್ಲೆಕ್ಸ್‌ ಬಿಟ್ಟು ಬೇರೆ ಏನಾದರೂ ಬಳಸಿ ಎಂದು ಹೇಳುತ್ತಿದೆ. ಈ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ ಎಂದು ತಿಳಿಸಿತು. ಈ ಬಗ್ಗೆ ವಿವರಣೆ ನೀಡುವಂತೆ ಕೆಎಸ್‌ಆರ್‌ಟಿಸಿ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿತು.

Follow Us:
Download App:
  • android
  • ios