ಬೆಂಗಳೂರು [ಜು.27] : ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ವೇಳೆ ಚುನಾವಣಾಧಿಕಾರಿಗೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ. 

ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೋಕಸಭೆ ಸದಸ್ಯತ್ವವನ್ನು ಅಸಿಂಧುಗೊಳಿಸುವಂತೆ ಕೋರಿ ಮಾಜಿ ಸಚಿವ ಎ. ಮಂಜು ಮತ್ತು ಜಿ.ದೇವರಾಜೇಗೌಡ ಹೈಕೋರ್ಟ್‌ಗೆ ಪ್ರತ್ಯೇಕವಾಗಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. 

ಶುಕ್ರವಾರ ಈ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ| ಜಾನ್ ಮೈಕೆಲ್ ಕುನ್ಹ ಅವರು ಸಂಸದ ಪ್ರಜ್ವಲ್‌ಗೆ ಸಮನ್ಸ್ ಜಾರಿ ಮಾಡಿತು. ಅಲ್ಲದೆ, ಅರ್ಜಿ ಕುರಿತು ಆ.19ರಂದು ನಡೆಯುವ ವಿಚಾರಣೆಗೆ ಪ್ರಜ್ವಲ್ ಖುದ್ದಾಗಿ ಅಥವಾ ಅವರ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿ ಆಕ್ಷೇಪಣೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.