ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಗೆ ಇದೀಗ ಸಂಕಷ್ಟ ಎದುರಾಗಿದೆ. ಬೋಗಸ್‌ ಬಿಲ್‌ ಸೃಷ್ಟಿಸಲು ಯತ್ನಿಸಿದ ಪ್ರಕರಣದಲ್ಲಿ ಶಾಸಕ ಜಿ.ಮುನಿರತ್ನ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. 

ಬೆಂಗಳೂರು :  ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ .120 ಕೋಟಿ ಮೊತ್ತದ ಸಿವಿಲ್‌ ಕಾಮಗಾರಿ ಸಂಬಂಧ ಬೋಗಸ್‌ ಬಿಲ್‌ ಸೃಷ್ಟಿಸಲು ಯತ್ನಿಸಿದ ಪ್ರಕರಣದಲ್ಲಿ ಶಾಸಕ ಜಿ.ಮುನಿರತ್ನ ಅವರಿಗೆ ನೋಟಿಸ್‌ ಜಾರಿ ಮಾಡಿರುವ ಹೈಕೋರ್ಟ್‌ ಪ್ರಕರಣ ಕುರಿತು ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಪ್ರಕರಣದಲ್ಲಿ ಶಾಸಕ ಜಿ.ಮುನಿರತ್ನ, ಪತ್ನಿ ಮಂಜುಳಾ ಹಾಗೂ ಸೂರಪ್ಪ ಬಾಬು ಅವರನ್ನು ಪ್ರಕರಣದಲ್ಲಿ ಸಹ ಆರೋಪಿಗಳನ್ನಾಗಿ ಮಾಡಲು ಕೋರಿದ್ದ ಮಧ್ಯಂತರ ಅರ್ಜಿ ವಜಾಗೊಳಿಸಿದ್ದ ಲೋಕಾಯುಕ್ತ ವಿಶೇಷ ಕೋರ್ಟ್‌ ಆದೇಶ ರದ್ದುಪಡಿಸುವಂತೆ ಕೋರಿ ವಕೀಲ ಎನ್‌.ಪಿ.ಅಮೃತೇಶ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ರಾಜ್‌ಕುಮಾರ್ಗಿಲ್ಲದ ಜಾತಿ ಸುದೀಪ್‌ಗೇಕೆ: ಮುನಿರತ್ನ

ಅಲ್ಲದೆ, ಪ್ರಕರಣ ಸಂಬಂಧ ಲೋಕಾಯುಕ್ತ ಕೋರ್ಟ್‌ಗೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಮುನಿರತ್ನ ಅವರ ಹೆಸರನ್ನು ಏಕೆ ಕೈ ಬಿಡಲಾಯಿತು ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದೆ. ಜತೆಗೆ, ಈ ಅರ್ಜಿಯ ಮುಂದಿನ ವಿಚಾರಣೆವರೆಗೆ ಪ್ರಕರಣ ಕುರಿತ ಲೋಕಾಯುಕ್ತ ಕೋರ್ಟ್‌ ವಿಚಾರಣೆಗೆ ತಡೆನೀಡಿದ ಹೈಕೋರ್ಟ್‌, ಶನಿವಾರಕ್ಕೆ ವಿಚಾರಣೆ ಮುಂದೂಡಿದೆ.